ಕಾಂಗ್ರೆಸ್‍ನಲ್ಲಿ ಎರಡು ಗುಂಪುಗಳಿವೆ: ಎಂ ಪಿ ಪ್ರತಾಪ್ ಸಿಂಹ

ಸೋಮವಾರ, 16 ಮೇ 2022 (08:10 IST)
ಶ್ರೀರಂಗಪಟ್ಟಣ : ಕಾಂಗ್ರೆಸ್‌ ಪಕ್ಷದಲ್ಲಿ ಎರಡು ಗುಂಪುಗಳಿವೆ. ಒಂದು ಗುಂಪು ಸಿದ್ದರಾಮಯ್ಯ  ಪರ ಇದ್ದರೆ, ಮತ್ತೊಂದು ಗುಂಪು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಪರ ಇದೆ ಎಂದು ಮೈಸೂರು ಸಂಸದ ಪ್ರತಾಪ್‌ ಸಿಂಹ ಟೀಕಿಸಿದರು.
 
 ಪಟ್ಟಣದ ಖಾಸಗಿ ಬಸ್‌ ನಿಲ್ದಾಣದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶ ಮತ್ತು ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗೋರಿ ಪಾಳ್ಯದ ಬಸ್ಸು ಸಿದ್ದರಾಮಯ್ಯ ಟೀಂನ ವೈಸ್‌ ಕ್ಯಾಪ್ಟನ್‌ ಆಗಿ ಜಮೀರಣ್ಣ ಇದ್ದಾರೆ. ಡಿ.ಕೆ.ಶಿವಕುಮಾರ್‌ ಟೀಂನ ವೈಸ್‌ ಕ್ಯಾಪ್ಟನ್‌ ಆಗಿ ನಲಪಾಡ್‌ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
 
ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ತಾಲಿಬಾನಿ ಸರ್ಕಾರ ಬರುತ್ತದೆ. ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್‌ ಇಬ್ಬರಿಗೂ ಮುಸ್ಲಿಮರು ಓಟ್‌ ಬ್ಯಾಂಕ್‌ ಆಗಿದ್ದಾರೆ. ಸಿದ್ದರಾಮಯ್ಯ ಟಿಪ್ಪು ಜಯಂತಿ ಮಾಡಿ ನಮ್ಮ ಕಾರ್ಯಕರ್ತರನ್ನು ಹತ್ಯೆ ಮಾಡಿಸಿ ರಾಜ್ಯದಲ್ಲಿ ಅಶಾಂತಿ ಉಂಟು ಮಾಡಿದರು ಎಂದು ಆರೋಪಿಸಿದರು.
 
ಡಿ.ಕೆ. ಶಿವಕುಮಾರ್‌ ವಿರುದ್ಧ ಒಳಗಿನಿಂದಲೇ ಪಿತೂರಿ ಮಾಡಿ ತುಳಿದು ಮತ್ತೆ ಸಿಎಂ ಆಗಲು ಹೊರಟಿರುವ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ವೇಳೆ ಯಧು ವಂಶದವರು ನೆನಪಾಗಲಿಲ್ಲ. ಕಾನೂನು ಪದವಿ ಕೊಟ್ಟವಿಶ್ವ ವಿದ್ಯಾನಿಲಯ, ಕೆಆರ್‌ಎಸ್‌ ಅಣೆಕಟ್ಟೆನಿರ್ಮಿಸಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ್‌. ಆದರೆ, ಯಧುವಂಶವನ್ನು ನಿರ್ವಂಶ ಮಾಡಲು ಹೊರಟಿದ್ದ ಟಿಪ್ಪುವಿನ ಜಯಂತಿ ಆಚರಣೆಗೆ ನಾಂದಿ ಹಾಡಿದರು ಎಂದು ಕಿಡಿಕಾರಿದರು.
 
ವಿಪಕ್ಷ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಬೇಕೆಂಬ ದುರಾಸೆಯಿಂದ ತಮ್ಮ ಪಕ್ಷದ ಪ್ರತಿಸ್ಪರ್ಧಿಗಳನ್ನು ಹಣಿಯಲು ಶುರು ಮಾಡಿದ್ದಾರೆ. ಇದರಿಂದ ಆ ಪಕ್ಷದಲ್ಲಿ ಒಗ್ಗಟ್ಟು ಇಲ್ಲದೇ ಹೀನಾಯ ಸ್ಥಿತಿಗೆ ತಲುಪಿದೆ ಎಂದು ದೂರಿದರು. ಒಬ್ಬ ವ್ಯಕ್ತಿ ಜನರ ಮುಂದೆ ಮತ ಕೇಳಲು ಹೋಗಬೇಕಾದರೆ ತನ್ನ ಅಧಿಕಾರಾವಧಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕೆಲಸ ಮುಂದಿಟ್ಟುಕೊಂಡು ಹೋಗಬೇಕು. 
 
ಕೇಂದ್ರ ಮತ್ತು ರಾಜ್ಯ ಸರ್ಕಾರ ಮಂಡ್ಯದ ಜನತೆ ನಮಗೆ ಮತ ಹಾಕಿಲ್ಲ ಎಂದು ಕಡೆಗಣಿಸಿಲ್ಲ. ಎಲ್ಲ ಜಿಲ್ಲೆಗೂ ಸಮಾನವಾಗಿ ಅಭಿವೃದ್ಧಿ ಕೆಲಸ ಹಂಚಿಕೆ ಮಾಡಿದೆ ಎಂದರು. ಶ್ರೀರಂಗಪಟ್ಟಣ ತಾಲೂಕಿನ ಕಿರಂಗೂರುನಿಂದ ಪಾಂಡವಪುರ ಪಟ್ಟಣದವರೆಗೆ 27 ಕೋಟಿ ರು.ವೆಚ್ಚದಲ್ಲಿ ರಸ್ತೆ ಅಗಲೀಕರಣಕ್ಕೆ ಕೇಂದ್ರ ಸರ್ಕಾರದಿಂದ ಅನುಮೋದನೆ ಕೊಡಿಸಿದ್ದೇನೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ