ಪಿಯುಸಿ ಪರೀಕ್ಷೆಗೆ ಸಮವಸ್ತ್ರ ಧರಿಸಿ ಬರುವುದು ಕಡ್ಡಾಯ. ಹಿಜಾಬ್ ಸೇರಿದಂತೆ ಯಾವುದೇ ಧರ್ಮದ ವಸ್ತ್ರ ಧರಿಸಿ ಬರುವಂತಿಲ್ಲ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಯುಸಿ ಪರೀಕ್ಷೆಯಲ್ಲಿ ಸಮವಸ್ತ್ರ ಇರುವ ಶಾಲೆಗಳಲ್ಲಿ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ಪರೀಕ್ಷೆಗೆ ಬರಬೇಕು. ಸಮವಸ್ತ್ರ ಇಲ್ಲದ ಕಡೆ ಯಾವುದೇ ಧರ್ಮ ಬಿಂಬಿಸುವ ವಸ್ತ್ರ ಧರಿಸಿ ಬರುವಂತಿಲ್ಲ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಶಿಕ್ಷಕರಿಗೆ ಸಮವಸ್ತ್ರ ಕಡ್ಡಾಯವಲ್ಲ. ಪರೀಕ್ಷಗೆ ಗೈರು ಹಾಜರಾದವರಿಗೆ ಸೆಪ್ಲಿಮೆಂಟರಿ ಪರೀಕ್ಷೆ ಬರೆಯಲು ಅವಕಾಶ ಇರುತ್ತದೆ ಎಂದು ಅವರು ಹೇಳಿದರು.
ಏಪ್ರಿಲ್ 22ರಿಂದ ಮೇ 18ರವರೆಗೆ ಪಿಯುಸಿ ಪರೀಕ್ಷೆ ನಡೆಯಲಿದ್ದು, ಬೆಳಿಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ಪರೀಕ್ಷೆ ಜರುಗಲಿದ್ದು, ಈ ಬಾರಿ ಒಟ್ಟು 6,84,255 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಅವರು ತಿಳಿಸಿದರು.