ಬೆಂಗಳೂರು : ಕೇಂದ್ರ ಸರಕಾರದ ನಿರ್ದೇಶನದಂತೆ ನಗರದಲ್ಲಿನ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಜ. 3ರಿಂದ ಕೋವಿಡ್ ಲಸಿಕೆ ನೀಡಲು ಬಿಬಿಎಂಪಿ ಅಗತ್ಯ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಈ ವಯಸ್ಸಿನ 5 ಲಕ್ಷ ಮಕ್ಕಳಿದ್ದಾರೆ.
ನಗರದಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ಮಂಗಳವಾರ ಅಧಿಕಾರಿಗಳೊಂದಿಗೆ ವರ್ಚುವಲ್ ಮೂಲಕ ನಡೆಸಿದ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಮುಖ್ಯ ಆಯುಕ್ತ ಗೌರವ್ ಗುಪ್ತ, ''15-18 ವರ್ಷದೊಳಗಿನ ಮಕ್ಕಳಿಗೆ ಜ. 3ರಿಂದ ಲಸಿಕೆ ನೀಡಲು ಆಯಾ ವಲಯ ವ್ಯಾಪ್ತಿಯಲ್ಲಿ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು,'' ಎಂದು ಅಧಿಕಾರಿಗಳಿಗೆ ಸೂಚಿಸಿದರು.
''ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಸರಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜುಗಳ ಪಟ್ಟಿಯನ್ನು ವಲಯವಾರು ಸಿದ್ಧಪಡಿಸಿಕೊಳ್ಳಬೇಕು. ಶಾಲಾ-ಕಾಲೇಜುಗಳಿಗೆ ಲಸಿಕೆ ನೀಡುವ ಸಿಬ್ಬಂದಿಯನ್ನು ನಿಯೋಜನೆ ಮಾಡಬೇಕು.
ಶಾಲಾ-ಕಾಲೇಜುಗಳಿಂದ ಹೊರಗುಳಿದಿರುವ ಮಕ್ಕಳನ್ನೂ ಗುರುತಿಸಿ ಲಸಿಕೆ ನೀಡಬೇಕು. ಕೊಳೆಗೇರಿ ಪ್ರದೇಶಗಳು, ಕೈಗಾರಿಕಾ ಪ್ರದೇಶಗಳಲ್ಲಿರುವ ಮಕ್ಕಳನ್ನೂ ಪತ್ತೆ ಮಾಡಿ, ಎನ್ಜಿಒಗಳ ಸಹಯೋಗದಲ್ಲಿ ಲಸಿಕೆ ನೀಡಲು ಕ್ರಮ ಕೈಗೊಳ್ಳಬೇಕು,'' ಎಂದು ತಾಕೀತು ಮಾಡಿದರು.