ಕೊರೊನಾದಿಂದ ಸತ್ತರೂ ಕಾಲಿಡದ ಡಿಸಿಎಂ ನಡೆಸಿದ್ರು ವಿಡಿಯೋ ಕಾನ್ಫರೆನ್ಸ್
ಮಂಗಳವಾರ, 17 ಮಾರ್ಚ್ 2020 (19:37 IST)
ಕೊರೋನಾ ಸೋಂಕಿನಿಂದ ವ್ಯಕ್ತಿಯೋರ್ವ ಮೃತರಾದರಿಂದ ಕಲಬುರಗಿಯಲ್ಲಿ ಕೊರೋನಾ ಭೀತಿ ಹೆಚ್ಚಿದ್ದು, ಮುಂಜಾಗ್ರತ ಕ್ರಮವಾಗಿ ಕಲಬುರಗಿ ಜಿಲ್ಲೆಯ ಎಲ್ಲಾ ಧಾರ್ಮಿಕ ಸ್ಥಳಗಳಲ್ಲಿ ಹೆಚ್ಚಿನ ನಿಗಾ ವಹಿಸಬೇಕು.
ಹೀಗಂತ ಉಪ ಮುಖ್ಯಮಂತ್ರಿ, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಎಂ. ಕಾರಜೋಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಕಲಬುರಗಿ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಜಿಲ್ಲೆಯ ಕೊರೋನಾ ಪರಿಸ್ಥಿತಿ ಅವಲೋಕಿಸಿ ಮಾತನಾಡಿದರು.
ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಾದ ಶ್ರೀ ದತ್ತನ ಕ್ಷೇತ್ರ ದೇವಲ ಗಾಣಗಾಪುರಕ್ಕೆ ಮಹಾರಾಷ್ಟ್ರ ರಾಜ್ಯದಿಂದ ಹೆಚ್ಚಿನ ಭಕ್ತರು ಆಗಮಿಸುತ್ತಾರೆ. ಮಹಾರಾಷ್ಟ್ರದಲ್ಲಿ ಈಗಾಗಲೆ ಕೊರೋನಾ ಪಾಸಿಟಿವ್ ಪ್ರಕರಣ ಹೆಚ್ಚಾಗಿ ಕಂಡುಬಂದಿದ್ದರಿಂದ, ಅಲ್ಲಿಂದ ಬರುವ ಭಕ್ತರ ಮೇಲೆ ನಿಗಾ ವಹಿಸುವ ಅವಶ್ಯಕತೆಯಿದೆ. ಅದೇ ರೀತಿಯಲ್ಲಿ ಕಲಬುರಗಿ ನಗರದ ಖಾಜಾ ಬಂದೇ ನವಾಜ್ ದರ್ಗಾಕ್ಕೆ ಆಂಧ್ರಪ್ರದೇಶ, ತೆಲಂಗಾಣಾದಿಂದ ಜನರು ಬರುತ್ತಾರೆ. ಇಲ್ಲಿ ಜನಸಂದಣಿಯಾಗದಂತೆ ನೋಡಿಕೊಳ್ಳಿ ಎಂದರು.
ಮಾರ್ಚ್ 22 ರಿಂದ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಶ್ರೀಶೈಲ್ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಯುಗಾದಿ ಮಹೋತ್ಸವ ಕಾರ್ಯಕ್ರಮಗಳು ಜರುಗಲಿದ್ದು, ಭಕ್ತಾದಿಗಳಿಗೆ ಅರಿವು ಮೂಡಿಸುವ ಮೂಲಕ ಹೆಚ್ಚಿನ ಜನ ಅಲ್ಲಿಗೆ ಹೋಗದಂತೆ ಮನವರಿಕೆ ಮಾಡಿ ಎಂದರು.