ಬೆಂಗಳೂರು: ಈ ಬಾರಿ ವಾಡಿಕೆಯಷ್ಟು ಮಳೆಯಾಗದ ಕಾರಣ ಬೆಂಗಳೂರು ನಗರ ಅವಧಿಗೂ ಮುನ್ನ ಜಲಕ್ಷಾಮ ಎದುರಿಸುತ್ತಿದೆ. ನೀರಿನ ಟ್ಯಾಂಕರ್ ಬೆಲೆ ಗಗನಕ್ಕೇರಿದೆ.
ಸಾಮಾನ್ಯವಾಗಿ ಮಾರ್ಚ್ ಬಳಿಕ ಬೆಂಗಳೂರಿನಲ್ಲಿ ನೀರಿನ ಕೊರತೆ ಕಂಡುಬರುತ್ತದೆ. ಬೆಂಗಳೂರು ನಿವಾಸಿಗಳು ಬೇಸಿಗೆಯಲ್ಲಿ ನೀರಿನ ಟ್ಯಾಂಕರ್ ಆಶ್ರಯಿಸುವುದು ಸಾಮಾನ್ಯ. ಆದರೆ ಈ ಬಾರಿ ಡಿಸೆಂಬರ್ ನಿಂದಲೇ ನೀರಿನ ಟ್ಯಾಂಕರ್ ಗಳ ಮೊರೆ ಹೋಗುವ ಪರಿಸ್ಥಿತಿ ಎದುರಾಗಿದೆ.
ನೀರಿನ ಟ್ಯಾಂಕರ್ ಬೆಲೆ ಗಗನಕ್ಕೆ
ಡಿಸೆಂಬರ್ ನಲ್ಲಿ ಟ್ರ್ಯಾಕ್ಟರ್ ಮೂಲಕ ಬರುತ್ತಿದ್ದ ನೀರಿನ ಟ್ಯಾಂಕರ್ ಬೆಲೆ ಸುಮಾರು 500 ರೂ.ಗಳಷ್ಟಿತ್ತು. ಅದೀಗ 800 ರೂ.ಗಳಿಂದ 1000 ರೂ.ವರೆಗೆ ತಲುಪಿದೆ. ಲಾರಿ ಮೂಲಕ ನೀರು ತರಿಸಿದರೆ 1500 ರೂ.ಗಳಿಂದ 2000 ರೂ.ವರೆಗೆ ಬೆಲೆ ಹೇಳುತ್ತಿದ್ದಾರೆ. ಅದೂ ನೀವು ಎಷ್ಟು ಸಮಯ ಮೊದಲು ನೀರಿಗೆ ಆರ್ಡರ್ ಕೊಡುತ್ತೀರಿ ಎಂಬುದರ ಮೇಲೆ ಬೆಲೆ ನಿರ್ಧಾರವಾಗುತ್ತದೆ!
ಅರ್ಜೆಂಟಾಗಿ ಇಂದು ಹೇಳಿ ನಾಳೆಯೇ ನೀರು ಬರಬೇಕೆಂದರೆ 2000 ರೂ.ವರೆಗೂ ವಸೂಲಿ ಮಾಡುತ್ತಿದ್ದಾರೆ. ಆದರೆ ನಾಲ್ಕು ದಿನವಾದರೂ ಪರವಾಗಿಲ್ಲ ಎಂದರೆ 1000 ರೂ.ನಿಂದ 1500 ರೂ.ವರೆಗೆ ಬೆಲೆಯಿದೆ. ಅದೂ ಹೇಳಿದ ಸಮಯಕ್ಕೆ ನೀರು ಬರುವುದಿಲ್ಲ. ಯಾಕೆಂದರೆ ಅವರಿಗೂ ಬೇಡಿಕೆ ಹೆಚ್ಚಾಗಿರುವುದರಿಂದ ನಿಗದಿತ ಸಮಯಕ್ಕೆ ನೀರು ಲೋಡ್ ಮಾಡಿಕೊಂಡು ತರುವುದು ಕಷ್ಟವಾಗುತ್ತಿದೆ.
ಟ್ಯಾಂಕರ್ ಮಾಲಿಕರು ಹೇಳುವುದೇನು?
ನೀರು ಬೇಕೆಂದರೆ ಕನಿಷ್ಠ ನಾಲ್ಕು ದಿನದ ಮೊದಲೇ ಬುಕ್ ಮಾಡಬೇಕು. ಅದರಲ್ಲೂ ಕೆಲವರು ಮನೆವರೆಗೆ ನೀರು ತಂದ ಮೇಲೆ ರೇಟ್ ಬಗ್ಗೆ ಚರ್ಚೆಗಿಳಿಯುತ್ತಾರೆ. ನಮಗೆ ನೀರು ಲೋಡ್ ಮಾಡಿ ತರುವುದೇ ಕಷ್ಟ. ಹೀಗಿರುವಾಗ ನಮ್ಮ ಕಷ್ಟವೂ ಅರ್ಥ ಮಾಡಿಕೊಳ್ಳಬೇಕಲ್ವಾ? ಅದೂ ಅಲ್ಲದೆ, ಕೆಲವೆಡೆ ರಸ್ತೆ ಕಿರಿದಾಗಿದ್ದು, ನಮ್ಮ ಟ್ಯಾಂಕರ್ ಹೋಗಲು ಕಷ್ಟವಾಗುತ್ತದೆ. ಅಂತಹ ಸಂದರ್ಭದಲ್ಲಿ ನೀರು ಆರ್ಡರ್ ಮಾಡಿದವರ ಮನೆ ಪಕ್ಕದ ರಸ್ತೆವರೆಗೆ ಬಂದು ಒಳಗೆ ಹೋಗಲಾಗದೇ ವಾಪಸ್ ಲೋಡ್ ತೆಗೆದುಕೊಂಡು ಹೋಗಬೇಕಾಗುತ್ತದೆ. ಆಗ ನಮಗೂ ನಷ್ಟ ಎಂದು ಟ್ಯಾಂಕರ್ ಮಾಲಿಕರೊಬ್ಬರು ಹೇಳುತ್ತಾರೆ.
ಟ್ಯಾಂಕರ್ ನೀರಿನ ಬ್ಯುಸಿನೆಸ್ ಶುರು
ಕೆಲವು ಸಣ್ಣ ಪುಟ್ಟ ಡ್ರೈವರ್ ಕೆಲಸ ಮಾಡುತ್ತಿದ್ದವರು ಈಗ ಟ್ಯಾಂಕರ್ ನೀರು ಸರಬರಾಜು ಮಾಡುವ ಬ್ಯುಸಿನೆಸ್ ಶುರು ಮಾಡಿಕೊಂಡಿದ್ದಾರೆ. ಇದೇ ರೀತಿ ಶಾಲೆಯಲ್ಲಿ ಡ್ರೈವರ್ ಕೆಲಸ ಮಾಡಿಕೊಂಡು ನೀರು ಪೂರೈಕೆಗಿಳಿದಿರುವ ವ್ಯಕ್ತಿಯೊಬ್ಬರು ಹೇಳಿದ್ದು ಹೀಗೆ. ನಮಗೆ ಶಾಲೆ ಕೆಲಸ ಹೆಚ್ಚು ಹೊತ್ತು ಇರಲ್ಲ. ಬೆಳಿಗ್ಗೆ ಮತ್ತು ಸಂಜೆ ಪಿಕ್ ಅಪ್ ಮತ್ತು ಡ್ರಾಪ್ ಮಾಡಿದರೆ ಸಾಕು. ಉಳಿದ ಸಮಯದಲ್ಲಿ ನೀರಿನ ಬ್ಯುಸಿನೆಸ್ ಮಾಡುತ್ತಿದ್ದೇನೆ. ಈಗ ಇದರಿಂದ ನನಗೆ ಕೊಂಚ ಸಹಾಯವಾಗುತ್ತಿದೆ ಎಂದಿದ್ದಾರೆ.
ನೀರಿನ ಟ್ಯಾಂಕ್ ಗೆ ಬೀಗ!
ಬೆಂಗಳೂರಿನಲ್ಲಿ ನೀರಿಗಾಗಿ ಎಷ್ಟು ಹಾಹಾಕಾರವಾಗಿದೆ ಎಂದರೆ ಕೆಲವೆಡೆ ನೀರಿನ ಕಳ್ಳತನವಾಗುತ್ತದೆಂಬ ಭಯಕ್ಕೆ ಟ್ಯಾಂಕ್, ಸಂಪ್ ಗೆ ಬೀಗ ಹಾಕುವಂತಹ ಪರಿಸ್ಥಿತಿಯಿದೆ. ಥಣಿಸಂದ್ರದಲ್ಲಿ ಟ್ಯಾಂಕಿಗೆ ಬೀಗ ಹಾಕಿದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಮನೆಯ ಹೊರಗೆ ನಲ್ಲಿಯಲ್ಲಿ ನೀರು ಬರುವಂತಿದ್ದರೆ ಯಾರು ಹೇಳದೇ ಕೇಳದೇ ನೀರು ಹೊತ್ತುಕೊಂಡು ಹೋಗುತ್ತಾರೋ ಎಂಬ ಭಯ ನಿವಾಸಿಗಳಲ್ಲಿದೆ!
ನೀರಿನ ಕೊರತೆಗೆ ಕಾರಣವೇನು?
ಈ ಬಾರಿ ವಾಡಿಕೆಯಷ್ಟೂ ಮಳೆಯಾಗಿಲ್ಲ. ಸಾಮಾನ್ಯವಾಗಿ ಬೆಂಗಳೂರಿನಲ್ಲಿ ನವಂಬರ್ ತಿಂಗಳಲ್ಲಿ ಸ್ವಲ್ಪ ಮಳೆಯಾಗುತ್ತದೆ. ಆದರೆ ಈ ಬಾರಿ ಆ ಮಳೆಯೂ ಬಿದ್ದಿಲ್ಲ. ಅತ್ತ ಬೋರ್ ವೆಲ್ ಗಳು ಬತ್ತಿ ಹೋಗಿವೆ. ಶೇ.80 ರಷ್ಟು ಬೋರ್ ವೆಲ್ ಗಳು ಬತ್ತಿ ಹೋಗಿದ್ದು, ಹೊಸದಾಗಿ ಬೋರ್ ವೆಲ್ ಮಾಡಲು ಹೊರಟರೂ 15000 ಅಡಿ ಕೊರೆದರೂ ನೀರು ಸಿಗದ ಪರಿಸ್ಥಿತಿಯಾಗಿದೆ. ಇನ್ನು, ಕಾವೇರಿ ನೀರು ಎಲ್ಲಾ ಕಡೆಗೆ ಬರುತ್ತಿಲ್ಲ. ಬೆಂಗಳೂರಿನ ಕೆಲವು ಗ್ರಾಮಾಂತರ ಪ್ರದೇಶಗಳಲ್ಲಿ ಈಗಲೂ ಕಾವೇರಿ ನೀರಿನ ವ್ಯವಸ್ಥೆಯಿಲ್ಲ. ಪಂಚಾಯ್ತಿ ನೀರನ್ನೇ ಆಶ‍್ರಯಿಸಿಕೊಂಡಿರುವ ಪ್ರದೇಶಗಳಿವೆ. ಇಲ್ಲಿ ಮೊದಲೆಲ್ಲಾ ಎರಡು ದಿನಕ್ಕೊಮ್ಮೆ ಬರುತ್ತಿದ್ದ ನೀರು ಈಗ ವಾರಕ್ಕೊಮ್ಮೆ ಮಾತ್ರ ಬಿಡಲಾಗುತ್ತಿದೆ.
ಬೆಂಗಳೂರಿನಲ್ಲಿ ಹಲವು ಕೆರೆಗಳಿದ್ದು, ಅದನ್ನು ಸ್ವಚ್ಛಗೊಳಿಸಿ ನೀರು ಕುಡಿಯಲು ಯೋಗ್ಯವಾಗುವಂತೆ ಸರ್ಕಾರಗಳು ಯೋಜನೆ ರೂಪಿಸಬೇಕಿದೆ. ಅಲ್ಲದೆ, ಮಳೆ ನೀರು ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಿ ಕಡ್ಡಾಯವಾಗಿ ಎಲ್ಲರೂ ಮಳೆ ನೀರು ಸಂಗ್ರಹಣೆ ಮಾಡುವ ನಿಯಮ ಜಾರಿಗೆ ತರಬೇಕಿದೆ. ಈಗಾಗಲೇ ಬೆಂಗಳೂರು ಜನ ಸ್ನಾನ, ಇತ್ಯಾದಿ ದೈನಂದಿನ ಅಗತ್ಯಗಳಿಗೆ ನೀರಿಲ್ಲದೇ ಪರದಾಡುತ್ತಿದ್ದಾರೆ. ಇದು ಹೀಗೇ ಮುಂದುವರಿದರೆ ಮುಂದೆ ಕಡು ಬೇಸಿಗೆಯಲ್ಲಿ ಕುಡಿಯಲೂ ನೀರಿಲ್ಲದ ಪರಿಸ್ಥಿತಿ ಎದುರಾಗಲಿದೆ.