ಪ್ರಪಂಚದ ಎಲ್ಲಾ ಜೀವಿಗಳಲ್ಲೂ ತನ್ನ ಆಲೋಚನಾಶಕ್ತಿಯಿಂದ ವಿಶಿಷ್ಟನಾದ ಮಾನವನು ತನ್ನ ಶ್ರೇಯಸ್ಸನ್ನು ಬಯಸುತ್ತಾ ದೇವತಾರಾಧನೆ ಮಾಡುವ ಮಾರ್ಗವನ್ನು ಕಂಡುಕೊಂಡಿದ್ದಾನೆ.
ಯಾಗ ಹೋಮ ಹವನ ಪೂಜೆಗಳ ಜೊತೆ ವ್ರತ ಎನ್ನುವುದೂ ಇವುಗಳಲ್ಲಿ ಒಂದು. ಇಂತಹ ವ್ರತಗಳಲ್ಲಿ ಶ್ರೇಷ್ಠವಾದ, ಶ್ರಾವಣ ಮಾಸದ ಹುಣ್ಣಿಮೆಯ ಹಿಂದೆ ಬರುವ ಶುಕ್ರವಾರದಂದು ವಿಶೇಷವಾಗಿ ಸ್ತ್ರೀಯರು ಆಚರಿಸುವ ವ್ರತವೇ ವರಮಹಾಲಕ್ಷ್ಮೀವ್ರತ. ದೇವತೆಗಳ ಆರಾಧನೆಯನ್ನು ಯಾವರೀತಿಯಾಗಿ ಮಾಡಬೇಕೆಂದು ಹೇಳುವ ವೇದಶಾಸ್ತ್ರಗಳ ಸಾಲಿನಲ್ಲಿ ಎಲ್ಲಾ ವರ್ಗದ ಜನರಿಗೂ ಅರ್ಥವಾಗುವಂತೆ ಧರ್ಮವನ್ನು ತಿಳಿಸುವುದು ಪುರಾಣಗಳ ವೈಶಿಷ್ಟ್ಯ.ಇಂತಹ ಪುರಾಣಗಳಲ್ಲಿ ಒಂದಾದ ಭವಿಷ್ಯೋತ್ತರಪುರಾಣದಲ್ಲಿ ಪಾರ್ವತೀ ಪರಮೇಶ್ವರರ ಸಂವಾದ ರೂಪದಲ್ಲಿ ಈ ವ್ರತವು ಉಪದೇಶಿಸಲ್ಪಟ್ಟಿದೆ. ಸಾಧಾರಣವಾಗಿ ಬೇರೆಲ್ಲಾ ವ್ರತಾದಿಗಳಿಗೆ ತಿಥಿ-ನಕ್ಷತ್ರಗಳು ಪ್ರಧಾನವಾದರೆ ವರಮಹಾಲಕ್ಷ್ಮೀವ್ರತಕ್ಕೆ ವಾರವೇ ಪ್ರಧಾನ. ಶುಕ್ಲೇ ಶ್ರಾವಣಿಕೇ ಮಾಸೇ ಪೂರ್ಣಿಮಮೋಪಾಂತ್ಯಭಾರ್ಗವೇ | ವರಲಕ್ಷ್ಮ್ಯಾವ್ರತಂ ಕಾರ್ಯಂ ಎನ್ನುವ ಶ್ಲೋಕದ ಆಧಾರದಿಂದ ಶ್ರಾವಣಮಾಸದ ಹುಣ್ಣಿಮೆಗೆ ಹಿಂದೆ ಬರುವ ಶುಕ್ರವಾರ ಇದನ್ನು ಆಚರಿಸಬೇಕು ಎಂದು ತಿಳಿಯಬಹುದು.
ಹಿಂದೆ ಕೈಲಾಸದಲ್ಲಿ ಇಂದ್ರಾದಿಲೋಕಪಾಲಕರಿಂದ ನಾರದಾದಿಮುನಿಗಳಿಂದ ಸಹಿತನಾದ ಪರಮೇಶ್ವರನನ್ನು ಪಾರ್ವತಿಯು, ಪುತ್ರಪೌತ್ರಾದಿಗಳನ್ನು, ಸಕಲ ಐಶ್ವರ್ಯಗಳನ್ನು ನೀಡುವ ಶ್ರೇಷ್ಠವಾದ ವ್ರತವನ್ನು ಉಪದೇಶಿಸುವಂತೆ ಕೇಳುತ್ತಾಳೆ. ಸೌಭಾಗ್ಯವತಿಯಾದ ಪಾರ್ವತಿಯನ್ನು ಕುರಿತು ಈಶ್ವರನು, ಪಾರ್ವತಿಯೇ ಸಕಲಸಂಪತ್ತುಗಳಿಗೆ ಮೂಲವಾಗಿಯೂ, ಪುತ್ರಪೌತ್ರಸುಖದಾಯಕವಾಗಿಯೂ ಇರುವಂತಹ ವರಮಹಾಲಕ್ಷ್ಮೀ ವ್ರತ ಎನ್ನುವಂಥ ವ್ರತವೊಂದಿದೆ. ಈ ವ್ರತವನ್ನು ಯಾವ ರೀತಿ ಆಚರಿಸಬೇಕು ಎಂಬುದನ್ನು ಮತ್ತು ಆಚರಿಸುವಂಥ ಸ್ತ್ರೀಯರಿಗೆ ಉಂಟಾಗುವ ಪುಣ್ಯಫಲಗಳನ್ನು ಹೇಳುತ್ತೇನೆ ಕೇಳು ಎಂದು ಹೇಳುತ್ತಾ ಈ ವ್ರತವು ಮೊದಲು ಯಾರಿಂದ ಹೇಗೆ ಆಚರಿಸಲ್ಪಟ್ಟಿತು ಎಂದು ಹೇಳುತ್ತಾನೆ. ಹೀಗೆ ವರಮಹಾಲಕ್ಷ್ಮಿ ವ್ರತವು ಪ್ರಸಿದ್ಧಿಯಾಯಿತು.
ಭವಿಷ್ಯೋತ್ತರಪುರಾಣದ ಪ್ರಕಾರ ಚಾರುಮತಿ ಎಂಬ ಬ್ರಾಹ್ಮಣ ಸ್ತ್ರೀಯೊಬ್ಬಳು ಇದ್ದಳು. ಆಕೆಯು ಪತಿಭಕ್ತಿ ಪರಾಯಣಳೂ, ಅತ್ತೆಮಾವಂದಿರಿಗೆ ಶುಶ್ರೂಷೆಯನ್ನು ಮಾಡುವುದರಲ್ಲಿ ನಿರತಳೂ ಆಗಿದ್ದಳು. ಅದರ ಜೊತೆಗೆ ಎಲ್ಲ ಶಾಸ್ತ್ರಗಳನ್ನು ತಿಳಿದವಳು ಇಂಪಾಗಿ ಮಾತನಾಡುವವಳು ಯಾರ ಮನಸ್ಸನ್ನೂ ನೋಯಿಸದವಳಾಗಿ ಧರ್ಮಮಾರ್ಗದಲ್ಲಿ ನಡೆಯುತ್ತಿದ್ದಳು. ಅಂತಹ ಚಾರುಮತಿಗೆ ಒಂದು ದಿನ ಸ್ವಪ್ನದಲ್ಲಿ ಲಕ್ಷ್ಮಿಯು ಎಲೈ ಮಂಗಳಕರಳೇ, ನಾನು ವರಮಹಾಲಕ್ಷ್ಮಿಯಾಗಿ ನಿನಗೆ ಮಂಗಳವನ್ನುಂಟುಮಾಡಲು ಬಂದಿದ್ದೇನೆ. ಶ್ರಾವಣ ಮಾಸದಲ್ಲಿ ಪೂರ್ಣಿಮೆಗೆ ಮೊದಲು ಬರುವಂತಹ ಶುಕ್ರವಾರ ನನ್ನನ್ನು ಶ್ರದ್ಧಾ ಭಕ್ತಿಯಿಂದ ಆರಾಧಿಸು. ನಿನ್ನ ಇಷ್ಟಾರ್ಥಗಳನ್ನು ನಾನು ನೆರವೇರಿಸುತ್ತೇನೆ. ನಿನಗೆ ಪರಿಪೂರ್ಣವಾದ ಸಂಪತ್ತನ್ನು ನೀಡುತ್ತೇನೆ ಎಂದು ಸ್ವಪ್ನದಲ್ಲಿ ಹೇಳಿದಳು.
ಅದಕ್ಕೆ ಚಾರುಮತಿಯು ಲಕ್ಷ್ಮಿಯನ್ನು ಕುರಿತು ತಾಯಿ, ನೀನು ಜಗನ್ಮಾತೆಯು. ಪುಣ್ಯಸ್ವರೂಪಿಯಾದ ನೀನು ವಿಷ್ಣುವಿನ ವಕ್ಷಸ್ಥಳದಲ್ಲಿ ಸದಾಕಾಲ ಇರುವವಳು ನಿನ್ನ ಅನುಗ್ರಹದಿಂದಲೇ ಸಕಲ ಇಷ್ಟಾರ್ಥಗಳು ನೆರವೇರುತ್ತವೆ ನನ್ನ ಹಿಂದಿನ ಜನ್ಮಗಳ ಪುಣ್ಯದಿಂದಲೇ ನಿನ್ನ ದರ್ಶನವು ನನಗೆ ಲಭಿಸಿದೆ ನನ್ನನ್ನು ಆಶೀರ್ವದಿಸು ಎಂದು ಬೇಡುತ್ತಾ ಲಕ್ಷ್ಮಿಯನ್ನು ಪ್ರಾರ್ಥಿಸಿದಳು. ಲಕ್ಷ್ಮೀದೇವಿಯು ಅದರಂತೆ ಅವಳಿಗೆ ಆಶೀರ್ವದಿಸಿ ಅಖಂಡ ಸೌಭಾಗ್ಯವತಿಯಾಗಿಬಾಳು ಎಂದು ಹರಸಿ ಅಂತರ್ಧಾನಳಾದಳು. ಈ ಕನಸಿನ ವೃತ್ತಾಂತವನ್ನು ಬೇರೆಯ ಸ್ತ್ರೀಯರಿಗೆ ಹೇಳುತ್ತಾ ಅವರೆಲ್ಲರನ್ನು ಸೇರಿಸಿಕೊಂಡು ವ್ರತವನ್ನು ಮಾಡಲು ಚಾರುಮತಿಯು ಶ್ರಾವಣ ಮಾಸದ ಹುಣ್ಣಿಮೆಯ ಹಿಂದಿನ ಶುಕ್ರವಾರಕ್ಕಾಗಿ ಕಾದಳು.
ಅಂತಹ ಶುಭದಿನದಂದು ಸ್ವಪ್ನದಲ್ಲಿ ಲಕ್ಷ್ಮೀದೇವಿಯು ಹೇಳಿದಂತಹ ಕ್ರಮದಲ್ಲಿ ಆ ಲಕ್ಷ್ಮಿಯನ್ನು ಆರಾಧಿಸಿದಳು. ವಿಧವಿಧವಾದ ಪುಷ್ಪಗಳಿಂದ ಮಂಟಪವನ್ನು ಅಲಂಕರಿಸಿ ಹೊಸದಾದ ಅಕ್ಕಿ ಯಿಂದಲೂ ಮತ್ತು ನಾನಾ ತೋರಣಗಳಿಂದಲೂ ಮಾವು ಮತ್ತು ಹಲಸಿನ ಕುಡಿಗಳಿಂದ ಕೂಡಿದ ಕಲಶವನ್ನು ಸ್ಥಾಪನೆ ಮಾಡಿದರು. ಅದರಲ್ಲಿ ಪದ್ಮಾಸನೇ ಪದ್ಮಕರೇ ಸರ್ವಲೋಕೈಕಪೂಜಿತೇ | ನಾರಾಯಣಪ್ರಿಯೇ ದೇವಿ ಸುಪ್ರೀತಾ ಭವ ಸರ್ವದಾ || ಎನ್ನುವಂತಹ ಶ್ಲೋಕಗಳಿಂದ ವರಮಹಾಲಕ್ಷ್ಮಿಯನ್ನು ಆವಾಹನೆ ಮಾಡಿದರು. ಕಲ್ಪೋಕ್ತಪ್ರಕಾರವಾಗಿ ಅರ್ಚಿಸಿ ಬಲಕೈಯಲ್ಲಿ ಲಕ್ಷ್ಮಿಯ ಪ್ರಸಾದವಾದಂತಹ ದಾರವನ್ನು ಕಟ್ಟಿಕೊಂಡರು.ತುಪ್ಪದಿಂದ ಮಾಡಿದ ಭಕ್ಷ್ಯಗಳನ್ನು ನಿವೇದನೆ ಮಾಡಿ ನಂತರ ದಾನ ಧರ್ಮಗಳನ್ನು ಮಾಡಿ ಲಕ್ಷ್ಮಿಯನ್ನು ಪ್ರಾರ್ಥಿಸಿದರು. ಲಕ್ಷ್ಮಿಯ ಅನುಗ್ರಹದಿಂದ ಶ್ರೀಮಂತರಾಗಿ ಬಾಳಿದರು.