ಬೆಂಗಳೂರು: ಸದನಕ್ಕೆ ಸಚಿವರು ಸಮಯಕ್ಕೆ ಸರಿಯಾಗಿ ಬಾರದೆ ಸರ್ಕಾರದ ಗೌರವನ್ನು ತೆಗೆಯುತ್ತಿದ್ದಾರೆಂದು ಸ್ಪೀಕರ್ ಯುಟಿ ಖಾದರ್ ಅವರು ಕಿಡಿಕಾರಿದರು.
ಸದನದಲ್ಲಿ ಮಾತನಾಡಿದ ಸ್ಪೀಕರ್, ಸಚಿವರು ಸದನದಲ್ಲಿ ಹಾಜರಿರಬೇಕು, ಅವರ ಗೈರುಹಾಜರಿಯನ್ನು ಯಾರೂ ಸಹಿಸುವುದಿಲ್ಲ. ಸಚಿವರು ಈ ಸರ್ಕಾರದ ಘನತೆಯನ್ನು ಕುಗ್ಗಿಸುತ್ತಿದ್ದಾರೆ. ಉತ್ತಮ ಕೆಲಸಗಳ ಹೊರತಾಗಿಯೂ, ಸಚಿವರು ಸಮಯಕ್ಕೆ ಸರಿಯಾಗಿ ಸದನಕ್ಕೆ ಬಾರದೇ ಸರ್ಕಾರದ ಗೌರವವನ್ನು ತೆಗೆಯುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಪ್ರತಿಪಕ್ಷದವರು ಹೇಳಿದಂತೆ ಸದನದಲ್ಲಿ ಸಚಿವರು ಇರಬೇಕೆಂದು ಅವರು ಕೇಳುವುದು ಸರಿಯಿದೆ. ಮುಖ್ಯಮಂತ್ರಿ ಇದ್ದಾಗ ಎಲ್ಲಾ ಸಚಿವರೂ ಬರುತ್ತಾರೆ. ಅವರಿಲ್ಲದಿದ್ದಾಗಲೂ ಎಲ್ಲಾ ಸಚಿವರಿರಬೇಕು. ಮುಖ್ಯಮಂತ್ರಿ ಬೆಂಬಲಕ್ಕೆ ಸಚಿವರು ನಿಲ್ಲುವುದು ಬೇಕಾಗಿಲ್ಲ. ಅವರು ಸಮರ್ಥಿಸಿಕೊಳ್ಳುತ್ತಾರೆ ಎಂದು ಹೇಳಿದರು.
"ಈ ಸರ್ಕಾರವನ್ನು ಪ್ರಶ್ನಿಸಲು ಸದನದಲ್ಲಿ ಯಾರಿದ್ದಾರೆ? ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಪ್ರಶ್ನಿಸಲು ಯಾರೂ ಇಲ್ಲ, ಸ್ಪೀಕರ್ ಮುಂದೆ ಬಂದು ನಮ್ಮನ್ನು ರಕ್ಷಿಸಬೇಕು, ನೀವು (ಸ್ಪೀಕರ್) ಅಸಹಾಯಕರಾಗಬಾರದು" ಎಂದು ಆರ್ ಅಶೋಕ್ ಹೇಳಿದರು.
ಇದಕ್ಕು ಮುನ್ನ ಸದನದಲ್ಲಿ ಸಚಿವರಿಲ್ಲ ಎಂಬ ಆಕ್ಷೇಪವನ್ನು ಬಿಜೆಪಿ ಶಾಸಕರು ಪ್ರಸ್ತಾಪಿಸಿದರು. ಆಗ ಮಧ್ಯಪ್ರವೇಶಿಸಿದ ಸ್ಪೀಕರ್, ಸದನದಲ್ಲಿ ಇಂದು ಹಾಜರಿರಬೇಕಾದ ಸಚಿವರುಗಳ ಹೆಸರುಗಳನ್ನು ಉಲ್ಲೇಖಿಸಿದರು.
ಸಚಿವರಾದ ಕೆ.ಎಚ್.ಮುನಿಯಪ್ಪ, ಕೆ.ಜೆ.ಜಾರ್ಜ್, ದಿನೇಶ್ ಗುಂಡೂರಾವ್, ಕೃಷ್ಣಭೈರೇಗೌಡ, ಡಾ.ಎಚ್.ಸಿ.ಮಹದೇವಪ್ಪ, ಪ್ರಿಯಾಂಕ್ ಖರ್ಗೆ, ಜಮೀರ್ ಅಹಮದ್ ಖಾನ್, ಈಶ್ವರ್ ಖಂಡ್ರೆ ಸೇರಿದಂತೆ ಸದನಕ್ಕೆ ಗೈರು ಆಗಿದ್ದ ಸಚಿವರ ಹೆಸರುಗಳನ್ನು ವಾಚಿಸಿ ಮೂವರು ಸಚಿವರು ಮಾತ್ರ ಸದನದಲ್ಲಿ ಹಾಜರಿದ್ದಾರೆ ಎಂದು ಹೇಳಿದರು.