ಬೆಂಗಳೂರು: ನೂರಾರು ಮಹಿಳೆಯರ ಜೊತೆಗಿನ ರಾಸಲೀಲೆಯ ವಿಡಿಯೋ ಬಹಿರಂಗವಾದರೂ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಎಚ್ ಡಿ ರೇವಣ್ಣ ಇನ್ನೂ ಬಂಧನವಾಗಿಲ್ಲ. ಇದನ್ನೀಗ ಸಾರ್ವಜನಿಕರು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.
ಪ್ರಜ್ವಲ್ ರೇವಣ್ಣ ಮತ್ತು ತಂದೆ ಎಚ್ ಡಿ ರೇವಣ್ಣ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಬಂದಿದೆ. ಇಬ್ಬರ ಮೇಲೂ ಪ್ರಕರಣ ದಾಖಲಾಗಿದೆ. ಪ್ರಜ್ವಲ್ ರಾಸಲೀಲೆ ವಿಡಿಯೋಗಳೂ ತನಿಖಾಧಿಕಾರಿಗಳ ಕೈ ಸೇರಿದೆ. ಈ ಸಂಬಂಧ ಕೆಲವು ಮಹಿಳೆಯರು ಈಗಾಗಲೇ ದೂರು ಕೂಡಾ ನೀಡಿದ್ದಾರೆ.
ಹಾಗಿದ್ದರೂ ಇಬ್ಬರನ್ನೂ ಇದುವರೆಗೆ ಬಂಧಿಸಿಲ್ಲ. ಸದ್ಯಕ್ಕೆ ಪ್ರಜ್ವಲ್ ವಿದೇಶದಿಂದ ವಾಪಸ್ ಬರಬೇಕಿದೆಯಷ್ಟೇ. ಇಷ್ಟೆಲ್ಲಾ ದೌರ್ಜನ್ಯವೆಸಗಿದ ವ್ಯಕ್ತಿ ವಿದೇಶಕ್ಕೆ ಹೋದರೂ ಆತನನ್ನು ವಾಪಸ್ ಕರೆಸಿ ಬಂಧಿಸುವ ವ್ಯವಸ್ಥೆ ನಮ್ಮಲ್ಲಿಲ್ಲವೇ? ಅಥವಾ ನಮ್ಮ ದೇಶದಲ್ಲಿ ರಾಜಕಾರಣಿಗಳಿಗೆ, ಪ್ರಭಾವಿಗಳಿಗೆ ಬೇರೆ ಕಾನೂನು ಇದೆಯಾ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ಪ್ರಜ್ವಲ್ ಸ್ಥಾನದಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿಯಿದ್ದಿದ್ದರೆ ಆತನನ್ನು ಬಂಧಿಸಲು ಇಷ್ಟು ವಿಳಂಬವಾಗುತ್ತಿರಲಿಲ್ಲ. ಆದರೆ ಪ್ರಜ್ವಲ್ ನನ್ನು ಇದುವರೆಗೆ ಬಂಧಿಸದೇ ರಾಜಕಾರಣಿಗಳು, ಅಧಿಕಾರದಲ್ಲಿರುವವರೇ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಇದರ ವಿರುದ್ಧ ಈಗ ಸಾರ್ವಜನಿಕವಾಗಿ ಆಕ್ರೋಶ ಕೇಳಿಬರುತ್ತಿದೆ.