ತಿಮ್ಮನ ಹೆಂಡತಿ ಬೆಳಗ್ಗೆ ಎದ್ದು ನೋಡಿದಾಗ ತಿಮ್ಮ ಅಲ್ಲಿರಲಿಲ್ಲ. ಎಲ್ಲಿಗೆ ಹೋಗಿದ್ದಾರಪ್ಪಾ ಎಂದು ಹುಡುಕುತ್ತಾ ಬಂದಾಗ ಅಡುಗೆ ಕೋಣೆಯ ಒಂದು ಮೂಲೆಯಲ್ಲಿ ಕುಳಿತುಕೊಂಡು ತಿಮ್ಮ ಕಾಫಿ ಕುಡಿಯುತ್ತಿದ್ದ. ಮುಖ ಸಂಪೂರ್ಣ ಕಳೆಗುಂದಿತ್ತು. ಏನಾಯ್ತ್ರೀ ಎಂದು ತಿಮ್ಮನ ಹೆಂಡತಿ ಕೇಳಿದಳು.
ಆಗ ತಿಮ್ಮ ನಿರುತ್ಸಾಹದಿಂದ ಪೀಠಿಕೆ ಹಾಕಿದ. ನಿನಗೆ ನೆನಪಿದೆಯಾ 20 ವರ್ಷಗಳ ಹಿಂದೆ ನಾನು ನೀನು ಪ್ರೀತಿಸಲು ಆರಂಭಿಸಿದ್ದೆವು. ಅದನ್ನು ಕೇಳಿದ ಕೂಡಲೇ ಹೆಂಡತಿಯ ಮುಖ ಅರಳಿತು. ಓಹೋ ಖಂಡಿತಾ ನೆನಪಿದೆ. ಎಷ್ಟು ಚೆನ್ನಾಗಿ ಆ ದಿನವನ್ನು ನೆನಪಿಟ್ಟುಕೊಂಡಿದ್ದೀರಾ ನೀವು ತುಂಬಾ ಗ್ರೇಟ್ ಎಂದಳು.
ನಂತರ ನಿಮ್ಮ ತಂದೆಗೆ ನಮ್ಮಿಬ್ಬರ ಪ್ರೀತಿ ತಿಳಿದು ಹೋಗಿ, ನನ್ನ ಮಗಳನ್ನು ಮದುವೆಯಾಗು ಇಲ್ಲದಿದ್ದರೆ ನೀನು 20 ವರ್ಷ ಜೈಲಿಗೆ ಹೋಗುತ್ತೀಯ ಎಂದು ಬೆದರಿಸಿದ್ದರು ನೆನಪಿದೆಯಾ ಎಂದು ಮತ್ತೊಮ್ಮೆ ಪ್ರಶ್ನಿಸಿದ. ಖಂಡಿತಾ ನೆನಪಿದೆ. ಅದೆಲ್ಲಾ ಈಗ್ಯಾಕೆ ಎಂದು ಪತ್ನಿ ಕೇಳಿದಳು.
ಒಂದು ವೇಳೆ ನಾನು ಜೈಲಿಗೆ ಹೋಗಿದ್ದರೆ, ಇವತ್ತಿಗೆ 20 ವರ್ಷ ಮುಗಿದು ಬಿಡುಗಡೆಗೊಳ್ಳುತ್ತಿದೆ ಎಂದು ವಿಷಾದದಿಂದ ತಿಮ್ಮ ಹೇಳಿದ.