ದಸರೆ ಪಾಸ್‌ಗಳು ಎಲ್ಲಿ 'ಪಾಸ್' ಆಗಿವೆ ಗೊತ್ತೇ?

ಮೈಸೂರು ದಸರೆಯಲ್ಲಿ ಪಾಸ್‌ಗಳದ್ದೇ ಅವಾಂತರ. ಯಾರನ್ನು ಕೇಳಿದರೂ "ಇಲ್ಲ" ಎಂಬುದು ಸಾರ್ವತ್ರಿಕವಾಗಿ ಕೇಳಿಬರುವ ಉತ್ತರ.

ಒಂದು ವರದಿಯ ಪ್ರಕಾರ ಮಾಧ್ಯಮಗಳಿಗೂ ಸಹ ಈ ಬಾರಿ "ಪಾಸ್ ಬರ"ದ ಬಿಸಿ ತಟ್ಟಿದೆ. ಹಿಂದೆಲ್ಲಾ ವಶೀಲಿಗರ ತವರೂರಾಗಿದ್ದ ಮೈಸೂರು ದಸರಾ ಈ ಬಾರಿ ಕೇಳುಗರೇ ಇಲ್ಲದೆ ಬವಣಿಸಿದೆ. ಹಾಗಂತ ಜನವೇನೂ ಇಲ್ಲದಿಲ್ಲ. ಎಲ್ಲೆಲ್ಲೂ ಪಾಸ್‌ಗಾಗಿ ಪರದಾಟ. ಮೀಡಿಯಾದವರ, ಭಾರೀ ಕುಳಗಳ ಹಿಂದೆ ಓಡಾಟ ಬರೀ ವ್ಯರ್ಥದ ಕಸರತ್ತಾಗಿದೆ.

ಕಳೆದ ಬಾರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಈ ಬಾರಿ ವಿಶೇಷ ಪಾಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದುಸುರುವ ಅಧಿಕಾರಿಗಳು ಸಾರ್... ಹಾಗಿದ್ದರೆ ಪಾಸ್ ಕೊಡ್ತೀರಾ? ಅಂದ್ರೆ ಸಾಕು, "ಹಾಂ ಪಾಸಾ ಎಲ್ಲಿದೆ?" ಅಂತ ನಮಗೇ ಮರುಪ್ರಶ್ನೆ ಹಾಕುತ್ತಾರೆ.

ಸಾವಿರಾರು ಸಂಖ್ಯೆಯಲ್ಲಿ ಪಾಸ್‌ಗಳಿದ್ದರೂ ಸಹ ಅದೆಲ್ಲಿ ಹೋಯಿತು? ಏನಾಯಿತು? ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಅಂತೂ ಇಂತೂ ನೂಕು ನುಗ್ಗಲಿನಲ್ಲಿ ನೀವೇನಾದರೂ ಅರೆಕ್ಷಣ ಅರಮನೆ ಸುತ್ತಲೋ, ಇಲ್ಲಾ ವಸ್ತು ಪ್ರದರ್ಶನದ ಸುತ್ತಲೋ ಒಮ್ಮೆ ಸುತ್ತಿ ಬಂದರೆ ಅಲ್ಲಿರುವ ಅಧಿಕಾರಿಗಳು, ಅಧಿಕಾರಿಗಳ ಬಳಗದ ಜಾತ್ರೆಯನ್ನು ನೋಡಿಯಾದ ಮೇಲೆ ಪಾಸ್‌ಗಳು ಎಲ್ಲಿಗೆ ಪಾಸಾಗಿದ್ದವೆ ಎಂಬ ಸಂಶಯಕ್ಕೆ ಉತ್ತರ ಸಿಕ್ಕಿದರೂ ತಪ್ಪೇನಿಲ್ಲ!

ಜಂಬೂ ಸವಾರಿಯ ಕ್ಷಣಗಣನೆ ಆರಂಭವಾಗಿದ್ದರೂ ಸಹ ವಿಐಪಿ ಪಾಸ್‌ಗಳೆಲ್ಲಾ ಮಾಯವಾಗಿರುವುದು ಮತ್ತೊಂದು ಸೋಜಿಗದ ಅಂಶವಾಗಿದೆ. ಸಾರ್... ಈ ಪಾಸಾಯಣದ ಮೂಲ ಹುಡುಕಿದರೆ ಒಂದು ದೊಡ್ಡ ಸಬ್ಜೆಕ್ಟೇ ಸಿಕ್ಕುತ್ತೇ ಸಾರ್... ಇಡೀ ಪೇಪರಿಗೇ ಬರೀಬಹುದು... ಅಷ್ಟು ಗೋಲ್‌ಮಾಲ್‌ಗಳು ಈ ಬಾರಿ ನಡೆದಿವೆ ಅಂತ ಖಾಸಗಿ ಚಾನೆಲ್ ಉದ್ಯೋಗಿಯೊಬ್ಬರು ಉದ್ಗರಿಸುತ್ತಾರೆ.

ಮತ್ತೊಂದು ಗಮನಿಸಬೇಕಾದ ಅಂಶವೆಂದರೆ, ನೀವು ಈ ಬಾರಿ ದಸರೆಯ ಪಾಸ್ ಪಡೆಯಲು ಮೂವರು ಕಮೀಷನರ್‌ಗಳ ಅನುಮತಿಯನ್ನು ಪಡೆಯಬೇಕಂತೆ. ಮೈಸೂರಿನ ಇತಿಹಾಸದಲ್ಲೇ ಹಿಂದೆಂದೂ ಕಂಡು ಕೇಳರಿಯದಂತಹ ಪಾಸ್‌ಗಳ ಭರಾಟೆಯನ್ನು ಕಂಡ ಜನ, ಇದೇನು ಜಂಬೂ ಸವಾರಿಯೋ ಇಲ್ಲಾ ಪಾಸ್ ಸವಾರಿಯೋ ಎಂದು ಕೇಳುತ್ತಿದ್ದಾರಂತೆ!

ವೆಬ್ದುನಿಯಾವನ್ನು ಓದಿ