ವಾಷಿಂಗ್ಟನ್ : ನ್ಯಾಯಾಂಗ ಸಂವಿಧಾನಕ್ಕೆ ಮಾತ್ರ ಉತ್ತರದಾಯಿಯೇ ಹೊರತು ರಾಜಕೀಯ ಪಕ್ಷಗಳಿಗೆ ಅಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಹೇಳಿದ್ದಾರೆ.
ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಭಾರತೀಯ ಅಮೆರಿಕನ್ನರ ಸಂಘಟನೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ನ್ಯಾಯಾಂಗ ವ್ಯವಸ್ಥೆ ಕುರಿತಾಗಿ ರಾಜಕೀಯ ಪಕ್ಷಗಳು ನೀಡುತ್ತಿರುವ ಪರ-ವಿರೋಧದ ಹೇಳಿಕೆಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಅಧಿಕಾರದಲ್ಲಿರುವ ಸರ್ಕಾರದ ಪ್ರತಿ ಕ್ರಿಯೆಯೂ ನ್ಯಾಯಾಂಗದ ಅನುಮೋದನೆಗೆ ಅರ್ಹ ಎಂದು ಭಾವಿಸುತ್ತವೆ. ವಿರೋಧ ಪಕ್ಷಗಳೂ ತಮ್ಮ ರಾಜಕೀಯ ಸ್ಥಾನ ಮತ್ತು ಅನುಕೂಲತೆಗಳಿಗೆ ಪೂರಕವಾಗಿ ನ್ಯಾಯಾಂಗ ಇರಬೇಕೆಂದು ನಿರೀಕ್ಷಿಸುತ್ತವೆ.
ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಸಂಸ್ಥೆಗಳ ಕಾರ್ಯ ನಿರ್ವಹಣೆಯ ಬಗ್ಗೆ ಜನರಲ್ಲಿ ಸೂಕ್ತ ತಿಳಿವಳಿಕೆ ಕೊರತೆಗಳು ಇಂತಹ ಎಲ್ಲ ದುರ್ಬಲ ಆಲೋಚನೆಗಳಿಗೆ ಕಾರಣವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.