ನವದೆಹಲಿ: ದೆಹಲಿ ಅಬಕಾರಿ ಅಕ್ರಮ ಹಗರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ದೆಹಲಿ ಕೋರ್ಟ್ ನಡೆಸುತ್ತಿದೆ.
ಕೇಜ್ರಿವಾಲ್ ಪರ ಕೋರ್ಟ್ ನಲ್ಲಿ ವಾದ ಮಂಡಿಸಿದ ಅಭಿಷೇಕ್ ಮನು ಸಿಂಘ್ವಿ ಇದು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅವರು ಭಾಗವಹಿಸದಂತೆ ತಡೆಯುವ ಹುನ್ನಾರ ಎಂದಿದ್ದಾರೆ. ಅಷ್ಟೇ ಅಲ್ಲದೆ, ಆಮ್ ಆದ್ಮಿ ಪಾರ್ಟಿಯನ್ನು ಚುನಾವಣೆ ಪ್ರಕ್ರಿಯೆಯಿಂದ ದೂರ ತಳ್ಳುವ ಯತ್ನ ಎಂದಿದ್ದಾರೆ.
ಚುನಾವಣೆಯಲ್ಲಿ ಒಂದು ಪಕ್ಷವನ್ನು ಮುಗಿಸುವ ತಂತ್ರಗಳಲ್ಲಿ ಇದೂ ಒಂದು. ಚುನಾವಣೆ ನಡೆಯುವ ಸಂದರ್ಭದಲ್ಲೇ ಅವರನ್ನು ಬಂಧಿಸುವ ಅಗತ್ಯವೇನಿತ್ತು? ಈ ಹಗರಣದಲ್ಲಿ ಮುಖ್ಯಮಂತ್ರಿಗಳ ಪಾತ್ರವೇನು ಎಂದು ಇಡಿ ತಿಳಿಯಬೇಕಾಗಿತ್ತು. ಆದರೆ ಇದಕ್ಕೆ ಅವರನ್ನು ಬಂಧಿಸುವ ಅಗತ್ಯವಿರಲಿಲ್ಲ ಎಂದು ಕೇಜ್ರಿವಾಲ್ ಪರ ವಕೀಲರು ವಾದ ಮಂಡಿಸಿದ್ದಾರೆ.
ಇದಕ್ಕೆ ಮೊದಲು ದೆಹಲಿ ಕೋರ್ಟ್ ಗೆ ವರದಿ ಸಲ್ಲಿಸಿದ್ದ ಇಡಿ ಕೇಜ್ರಿವಾಲ್ ಹಗರಣದ ಮುಖ್ಯ ರೂವಾರಿ ಎಂದಿತ್ತು. ಅಲ್ಲದೆ, ಅವರು ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಹಲವು ದಾಖಲೆಗಳೂ ಇವೆ ಎಂದು ವರದಿ ನೀಡಿತ್ತು.