ಶ್ರೀನಗರ : ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಎನ್ಕೌಂಟರ್ ಆರಂಭವಾಗಿದ್ದು, ಭದ್ರತಾ ಪಡೆ ಒಬ್ಬ ಭಯೋತ್ಪಾದಕನನ್ನು ಹೊಡೆದುರುಳಿಸಿದೆ ಎಂದು ವರದಿಗಳು ತಿಳಿಸಿವೆ.
ಬಾರಾಮುಲ್ಲಾದ ಕರ್ಹಾಮಾ ಕುಂಜರ್ ಪ್ರದೇಶದಲ್ಲಿ ಎನ್ಕೌಂಟರ್ ಆರಂಭವಾಗಿದ್ದು, ಭದ್ರತಾ ಪಡೆಗಳು ಭಯೋತ್ಪಾದಕರಿಗೆ ತಕ್ಕ ಪ್ರತ್ಯುತ್ತರ ನೀಡುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ಪ್ರದೇಶದಲ್ಲಿ ಭಯೋತ್ಪಾದಕರು ಇರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮತ್ತು ಭದ್ರತಾ ಪಡೆಗಳ ಜಂಟಿ ತಂಡವು ಪ್ರದೇಶವನ್ನು ಸುತ್ತುವರೆದಿವೆ. ಭಯೋತ್ಪಾದಕರನ್ನು ಶರಣಾಗುವಂತೆ ಭದ್ರತಾ ಪಡೆಗಳು ಕೇಳಿದಾಗ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ.
ಬಾರಾಮುಲ್ಲಾ ಎನ್ಕೌಂಟರ್ನ ಬಗ್ಗೆ ಮಾಹಿತಿ ನೀಡಿದ ಎಸ್ಎಸ್ಪಿ ಅಮೋದ್ ಅಶೋಕ್ ನಾಗ್ಪುರೆ, ಹತ್ಯೆಯಾದ ಭಯೋತ್ಪಾದಕ ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯವನಾಗಿದ್ದು, ಲಷ್ಕರ್-ಎ-ತೈಬಾದೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಹೇಳಿದ್ದಾರೆ.
ಅಲ್ಲದೇ ಮುಂಬರುವ ಜಿ 20 ಸಭೆಯ ದೃಷ್ಟಿಯಿಂದ ಭದ್ರತಾ ಪಡೆಗಳು ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ. ಹತ್ಯೆಗೀಡಾದ ಭಯೋತ್ಪಾದಕನಿಗೆ ಜಿ 20 ಸಭೆಯ ಮೊದಲು ದೊಡ್ಡ ಭಯೋತ್ಪಾದಕ ದಾಳಿಯನ್ನು ನಡೆಸುವಂತೆ ಹೇಳಿದ್ದರು ಎಂದು ತಿಳಿಸಿದರು.