ನವದೆಹಲಿ: ಅಬಕಾರಿ ಅಕ್ರಮ ಪ್ರಕರಣದಲ್ಲಿ ಇಡಿ ಅಧಿಕಾರಿಗಳಿಂದ ಬಂಧಿತರಾಗಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಬಂಧನಕ್ಕೊಳಗಾಗಿದ್ದರೂ ಕೇಜ್ರಿವಾಲ್ ತಮ್ಮ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿಲ್ಲ. ಜೈಲಿನಲ್ಲಿದ್ದುಕೊಂಡೇ ರಾಜ್ಯಭಾರ ನಡೆಸುವುದಾಗಿ ಹೇಳಿದ್ದರು. ಇದೀಗ ನಿನ್ನೆಯಷ್ಟೇ ಕೇಜ್ರಿವಾಲ್ ಜೈಲಿನಲ್ಲಿದ್ದುಕೊಂಡೇ ದೆಹಲಿಯ ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಆದೇಶವೊಂದನ್ನು ಹೊರಡಿಸಿದ್ದರು.
ಅವರ ಆದೇಶವನ್ನು ಆಪ್ ನಾಯಕಿ ಅತಿಶಿ ಪತ್ರಿಕಾಗೋಷ್ಠಿಯಲ್ಲಿ ಓದಿದ್ದರು. ಆದರೆ ಇದೀಗ ಅವರಿಗೆ ಉರುಳಾಗಿದೆ. ಜೈಲಿನಲ್ಲಿದ್ದುಕೊಂಡೇ ಆದೇಶ ನೀಡಿದ್ದನ್ನು ಬಿಜೆಪಿ ಪ್ರಶ್ನಿಸಿದೆ. ಈ ಬಗ್ಗೆ ಈಗ ಇಡಿ ಅಧಿಕಾರಿಗಳು ತನಿಖೆ ನಡೆಸಲು ಮುಂದಾಗಿದ್ದಾರೆ.
ಮುಖ್ಯಮಂತ್ರಿಗಳು ಜೈಲಿನಲ್ಲಿರುವಾಗ ಅವರ ಆಹಾರ, ಔಷಧಿಗಳಿಗೇ ಕೋರ್ಟ್ ಅನುಮತಿ ಪಡೆಯಬೇಕು. ಒಂದು ವೇಳೆ ಅವರು ಆದೇಶ ನೀಡಬೇಕಾದರೆ ಮುಖ್ಯಮಂತ್ರಿಗಳ ಕಚೇರಿ ತೆರೆಯಬೇಕು. ಹಾಗಿದ್ದರೆ ಕೇಜ್ರಿವಾಲ್ ಜೈಲಿನಲ್ಲಿರುವಾಗ ಮುಖ್ಯಮಂತ್ರಿಗಳ ಕಚೇರಿ ಬಾಗಿಲನ್ನು ಅನಧಿಕೃತವಾಗಿ ತೆರೆದಿದ್ದು ಯಾರು? ಪ್ರಧಾನ ಕಾರ್ಯದರ್ಶಿಗೆ ಈ ಅಧಿಕಾರವಿರುತ್ತದೆ. ಆದರೆ ಆದೇಶವನ್ನು ಓದಿದವರು ಅತಿಶಿಯವರು. ಅವರಿಗೆ ಯಾರು ಅಧಿಕಾರ ಕೊಟ್ಟರು? ಎಂದು ಬಿಜೆಪಿ ಪ್ರಶ್ನಿಸಿದೆ. ಬಿಜೆಪಿಯ ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಇಡಿ ಅಧಿಕಾರಿಗಳು ತನಿಖೆಗೆ ಮುಂದಾಗಿದ್ದಾರೆ.