ನವದೆಹಲಿ: ಅಬಕಾರಿ ಅಕ್ರಮ ಹಗರಣದಲ್ಲಿ 100 ಕೋಟಿ ರೂ. ಕಿಕ್ ಬ್ಯಾಕ್ ಪಡೆದ ಆರೋಪದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಜೈಲಿನಿಂದಲೇ ಮೊದಲ ಆದೇಶ ಹೊರಡಿಸಿದ್ದಾರೆ.
ಅಕ್ರಮ ಆರೋಪದಲ್ಲಿ ಬಂಧಿತರಾಗಿದ್ದರೂ ಕೇಜ್ರಿವಾಲ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಬದಲಾಗಿ ಜೈಲಿನಲ್ಲಿದ್ದುಕೊಂಡೇ ಅಧಿಕಾರ ಚಲಾಯಿಸುತ್ತಿದ್ದಾರೆ. ಈ ನಡುವೆ ಜೈಲಿನಲ್ಲಿಯೇ ದೆಹಲಿಯ ನೀರಿನ ಸಮಸ್ಯೆ ಕುರಿತು ಆಪ್ತರ ಮೂಲಕ ಹೊಸ ಆದೇಶ ಹೊರಡಿಸಿದ್ದಾರೆ. ಇದನ್ನು ಆಪ್ ನಾಯಕಿ, ದೆಹಲಿ ಜಲ ಸಚಿವೆ ಅತಿಶಿ ಮರ್ಲೆನಾ ಓದಿದ್ದಾರೆ.
ಕೇಜ್ರಿವಾಲ್ ನೀಡಿದ ಆದೇಶವನ್ನು ಮಾಧ‍್ಯಮಗಳ ಮುಂದೆ ಓದಿ ಅತಿಶಿ, ಜೈಲಿನಲ್ಲಿದ್ದರೂ ಮುಖ್ಯಮಂತ್ರಿಗಳಿಗೆ ಜನರದ್ದೇ ಚಿಂತೆ ಎಂದಿದ್ದಾರೆ. ದೆಹಲಿಯ ಕೆಲವು ಪ್ರದೇಶಗಳಲ್ಲಿ ಒಳಚರಂಡಿ ಮತ್ತು ನೀರಿನ ಸಮಸ್ಯೆಗಳಿವೆ ಎಂದು ತಿಳಿದುಕೊಂಡಿದ್ದೇನೆ. ಇದರಿಂದ ನಾನು ಚಿಂತಿತನಾಗಿದ್ದೇನೆ. ನಾನು ಜೈಲಿನಲ್ಲಿರುವುದರಿಂದ ಜನರಿಗೆ ತೊಂದರೆಯಾಗಬಾರದು ಎಂದು ಹೇಳಿದ್ದಾರೆ ಎಂದು ಅತಿಶಿ ಹೇಳಿದ್ದಾರೆ.
ಕೇಜ್ರಿವಾಲ್ ತಮ್ಮ ಹೊಸ ಆದೇಶದಲ್ಲಿ ದೆಹಲಿ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಅಗತ್ಯ ಬಿದ್ದರೆ ಲೆಫ್ಟಿನೆಂಟ್ ಗವರ್ನರ್ ಜೊತೆ ಮಾತನಾಡಬೇಕು. ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಪರಿಹಾರ ನೀಡಬೇಕು ಎಂದು ಸೂಚಿಸಿದ್ದಾರೆ ಎಂದು ಅತಿಶಿ ಆದೇಶ ಓದಿದ್ದಾರೆ.