ಬೆಂಗಳೂರು: ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿ ಮಾಡಲು ಕೃಷ್ಣ ಶಿಲೆ ನೀಡಲು ನೀಡಿದ್ದ ಶ್ರೀನಿವಾಸ್ ಅವರಿಗೆ ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವಿಧಿಸಿದ್ದ ದಂಡದ ಮೊತ್ತವನ್ನು ಬಿಜೆಪಿ ಭರಿಸಲಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಅಯೋಧ್ಯೆಯಲ್ಲಿ ಜನವರಿ 22 ರಂದು ಬಾಲ ರಾಮನ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಈ ಮೂರ್ತಿಯನ್ನು ಕೆತ್ತಿದ್ದು ಮೈಸೂರಿನ ಅರುಣ್ ಯೋಗಿರಾಜ್. ಮೂರ್ತಿ ನಿರ್ಮಿಸಲು ಕೃಷ್ಣ ಶಿಲೆ ನೀಡಿದ್ದು ಜಮೀನಿನ ಮಾಲಿಕ ರಾಮದಾಸ್. ಆದರೆ ಈ ನೆಲ ಸಮತಟ್ಟು ಮಾಡಲು ಗುತ್ತಿಗೆದಾರ ಶ್ರೀನಿವಾಸ್ ನಟರಾಜ್ ಅವರಿಗೆ ಗುತ್ತಿಗೆ ನೀಡಿದ್ದಾರೆ.
2022 ರಲ್ಲಿ ಜಮೀನಿನ 10 ಅಡಿ ಆಳದಲ್ಲಿ ದೊರೆತ ಶಿಲೆಯನ್ನು ಮೂರು ಭಾಗಗಳಾಗಿ ಮೇಲೆತ್ತಲಾಗಿತ್ತು. ಆದರೆ ಅಯೋಧ್ಯೆಗೆ ಶಿಲೆ ಹೋಗುತ್ತದೆ ಎಂಬ ಕಲ್ಪನೆ ಯಾರಿಗೂ ಇರಲಿಲ್ಲ. ಆದರೆ ಜಮೀನಿಂದ ಕಲ್ಲು ಹೊರತೆಗೆದಿದ್ದನ್ನು ಗಮನಿಸಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಭೂ ಮತ್ತು ಗಣಿ ವಿಜ್ಞಾನ ಇಲಾಖೆಗೆ ದೂರು ನೀಡಿದ್ದರು.
ಸ್ಥಳಕ್ಕೆ ಬಂದಿದ್ದ ಅಧಿಕಾರಿಗಳು ಅನುಮತಿಯಿಲ್ಲದೇ ಗಣಿಗಾರಿಕೆ ಮಾಡಬಾರದು ಎಂದು ಶ್ರೀನಿವಾಸ್ ಅವರಿಗೆ 80 ಸಾವಿರ ದಂಡ ವಿಧಿಸಿದ್ದರು. ಇದು ಇತ್ತೀಚೆಗೆ ಭಾರೀ ಸುದ್ದಿಯಾಗಿತ್ತು. ತಮ್ಮ ಹೆಂಡತಿಯ ಒಡವೆ ಅಡವಿಟ್ಟು ದಂಡ ಕಟ್ಟಿದ್ದಾಗಿ ಶ್ರೀನಿವಾಸ್ ಕಣ್ಣೀರು ಹಾಕಿದ್ದರು.
ಇದೀಗ ಆ ಬಗ್ಗೆ ಪ್ರತಿಕ್ರಿಯಿಸಿರುವ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಶ್ರೀನಿವಾಸ್ ಕಟ್ಟಿದ್ದ ದಂಡದ ಮೊತ್ತವನ್ನು ಬಿಜೆಪಿ ಅವರಿಗೆ ನೀಡಲಿದೆ ಎಂದಿದ್ದಾರೆ.