ಅಯೋಧ್ಯೆ ರಾಮಮಂದಿರಕ್ಕೆ ಭರ್ಜರಿ ದೇಣಿಗೆ ನೀಡಿದ ಅಂಬಾನಿ ಕುಟುಂಬ

Krishnaveni K

ಗುರುವಾರ, 25 ಜನವರಿ 2024 (09:07 IST)
ಮುಂಬೈ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮತ್ತು ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಎಷ್ಟೋ ಜನ ದಾನಿಗಳು ದೇಣಿಗೆ ನೀಡಿದ್ದಾರೆ. ಆ ಪೈಕಿ ದೇಶದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಕುಟುಂಬವೂ ಒಂದು.

ಜನವರಿ 22 ರಂದು ನಡೆದಿದ್ದ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಮುಕೇಶ್ ಅಂಬಾನಿ ತಮ್ಮ ಪತ್ನಿ ನೀತಾ, ಮಕ್ಕಳು, ಸೊಸೆ, ಅಳಿಯನ ಜೊತೆ ಹಾಜರಾಗಿದ್ದರು. ಇಡೀ ಕುಟುಂಬ ರಾಮಮಂದಿರದ ಮುಂದೆ ನಿಂತು ಫೋಟೋಗೆ ಪೋಸ್ ನೀಡಿದ್ದು ಎಲ್ಲೆಡೆ ವೈರಲ್ ಆಗಿತ್ತು.

ಎಲ್ಲರಿಗೂ ತಿಳಿದಿರುವ ಹಾಗೆ ಅಂಬಾನಿ ಕುಟುಂಬದಲ್ಲಿ ಎಲ್ಲರೂ ದೈವ ಭಕ್ತರು. ಯಾವುದೇ ಹಬ್ಬ-ಹರಿದಿನಗಳನ್ನು ಅಂಬಾನಿ ಕುಟುಂಬ ಭರ್ಜರಿಯಾಗಿ ಆಚರಿಸುತ್ತಾರೆ. ದಾನ ನೀಡುವ ವಿಚಾರದಲ್ಲೂ ಅವರು ಸದಾ ಮುಂದೆ. ಅದು ರಾಮಮಂದಿರ ವಿಚಾರದಲ್ಲೂ ನಡೆದಿದೆ.

ರಾಮಮಂದಿರಕ್ಕೆ ಅಂಬಾನಿ ಕೊಟ್ಟಿದ್ದೆಷ್ಟು?
ರಾಮ ಜನ್ಮಭೂಮಿ ಟ್ರಸ್ಟ್ ಗೆ ಅಂಬಾನಿ ಕುಟುಂಬ ಬರೋಬ್ಬರಿ 2.5 ಕೋಟಿ ರೂ. ದೇಣಿಗೆ ನೀಡಿದೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲದೆ, ರಾಮಲಲ್ಲಾನಿಗೆ 33 ಕೆ.ಜಿ. ತೂಕದ ಚಿನ್ನಾಭರಣ, ಮೂರು ಚಿನ್ನದ ಕಿರೀಟಗಳನ್ನು ದಾನ ಮಾಡಿದೆ ಎಂದು ಆಂಗ್ಲ ವಾಹಿನಿಗಳು ವರದಿ ಮಾಡಿದೆ. ಸಾವಿರಾರು ಕೋಟಿ ಒಡೆಯರಿಗೆ ಈ ಮೊತ್ತ ದೊಡ್ಡದೇನಲ್ಲ.

ಆದರೆ ಅಂಬಾನಿ ಕುಟುಂಬ ಈ ರೀತಿ ದಾನ ಮಾಡುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೆ ಮೊದಲು ಕೇದಾರನಾಥ ದೇವಾಲಯಕ್ಕೆ 5 ಕೋಟಿ ರೂ. ಕೇರಳದ ಗುರುವಾಯೂರು ದೇವಾಲಯಕ್ಕೆ 1.5 ಕೋಟಿ ರೂ., ತಿರುಪತಿ ದೇವಾಲಯಕ್ಕೆ 1.5 ಕೋಟಿ ರೂ. ದೇಣಿಗೆ ನೀಡಿದ್ದರು. ಇದೀಗ ರಾಮಮಂದಿರಕ್ಕೂ ಭಾರೀ ಮೊತ್ತದ ದೇಣಿಗೆ ನೀಡಿ ಸುದ್ದಿಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ