ಜಾರ್ಖಂಡ್ ಸಿಎಂ ಚಂಪಯಿ ಸೊರೇನ್ ಸರ್ಕಾರ ಉಳಿಯುತ್ತಾ? ಉರುಳುತ್ತಾ?

Krishnaveni K

ಸೋಮವಾರ, 5 ಫೆಬ್ರವರಿ 2024 (09:03 IST)
ರಾಂಚಿ: ಜಾರ್ಖಂಡ್ ನಲ್ಲಿ ಹೇಮಂತ್ ಸೊರೇನ್ ಬಂಧನದ ನಂತರ ನೂತನ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ ಚಂಪಯಿ ಸೊರೇನ್ ಗೆ ಇಂದು ವಿಶ್ವಾಸಮತ ಪರೀಕ್ಷೆ ಎದುರಾಗಿದೆ.

ಭ್ರಷ್ಟಾಚಾರ ಆರೋಪದಲ್ಲಿ ಹೇಮಂತ್ ಸೊರೇನ್ ಬಂಧನದ ಬಳಿಕ ಚಂಪಯಿ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಹೀಗಾಗಿ ಇಂದು ಚಂಪಯಿ ಸರ್ಕಾರ ವಿಶ್ವಾಸಮತ ಸಾಬೀತುಪಡಿಸಬೇಕಿದೆ. ಇಂದು ಬೆಳಿಗ್ಗೆ ಜಾರ್ಖಂಡ್ ವಿಧಾನಸಭೆಯಲ್ಲಿ ವಿಶ್ವಾಸಮತ ಪ್ರಕ್ರಿಯೆ ನಡೆಯಲಿದೆ. ವಿಶ್ವಾಸಮತ ಸಾಬೀತುಪಡಿಸಲು ರಾಜ್ಯಪಾಲರು 10 ದಿನಗಳ ಕಾಲಾವಕಾಶ ನೀಡಿದ್ದರು. ಈ ಮೂಲಕ ಈ ಸರ್ಕಾರ ಉಳಿಯುತ್ತಾ, ಉರುಳುತ್ತಾ ಎನ್ನುವ ಪ್ರಶ್ನೆಗೆ ಇಂದು ಉತ್ತರ ಸಿಗಲಿದೆ.

ಸಂಖ್ಯಾಬಲ ಹೇಗಿದೆ?
ಜಾರ್ಖಂಡ್ ವಿಧಾನಸಭೆಯಲ್ಲಿ ಒಟ್ಟು 81 ಸ್ಥಾನಗಳಿದ್ದು, ಬಹುಮತ ಸಾಬೀತುಪಡಿಸಲು 41 ಸಂಖ್ಯೆ ಸದಸ್ಯರ ಬೆಂಬಲವಿದ್ದರೆ ಸಾಕು. ಸದ್ಯಕ್ಕೆ ಆಡಳಿತಾರೂಢ ಜೆಎಂಎಂ 46 ಸದಸ್ಯರ ಬಲ ಹೊಂದಿದೆ. ಬಿಜೆಪಿ ಮತ್ತು ಇತರ ಪಕ್ಷಗಳು ಒಟ್ಟು 29 ಸ್ಥಾನಗಳನ್ನು ಹೊಂದಿವೆ. ಈಗಿನ ಲೆಕ್ಕಾಚಾರದ ಪ್ರಕಾರ ಇನ್ನು 6 ಮಂದಿ ಕೈಕೊಟ್ಟರೂ ಸರ್ಕಾರಕ್ಕೆ ಕಂಟಕ ಗ್ಯಾರಂಟಿ.

ತನ್ನ ಶಾಸಕರನ್ನು ಕಾಪಾಡಿಕೊಳ್ಳಲು ಜೆಎಂಎಂ ಹೈದರಾಬಾದ್ ಗೆ ಕಳುಹಿಸಿತ್ತು. ಇಂದು ಎಲ್ಲಾ ಶಾಸಕರೂ ವಿಧಾನಸಭೆಯಲ್ಲಿ ಹಾಜರಿರಲಿದ್ದಾರೆ. ವಿಶ್ವಾಸ ಮತ ಸಾಬೀತುಪಡಿಸಲು ದಿನ ಮುಂದೂಡಿದಷ್ಟು ಶಾಸಕರ ಖರೀದಿ ಅಪಾಯ ಹೆಚ್ಚಿರುವುದರಿಂದ ಇಂದೇ ಚಂಪಯಿ ವಿಶ್ವಾಸ ಮತ ಸಾಬೀತುಪಡಿಸಲು ಮುಂದಾಗಿದ್ದಾರೆ.

ವಿಶ್ವಾಸ ಮತಕ್ಕೆ ಮುನ್ನವೇ ಜೆಎಂಎಂ ಹಿರಿಯ ನಾಯಕ ಲೋಬಿನ್ ಹೆಂಬ್ರೊಮ್ ಭಿನ್ನಮತ ಹಾಡಿದ್ದಾರೆ. ವಿಶ್ವಾಸ ಮತಕ್ಕೆ ಮುನ್ನ ನನ್ನ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದ್ದಾರೆ. ಬುಡಕಟ್ಟು ಜನಾಂಗದವರ ಭೂಮಿಯನ್ನು ಇತರರಿಗೆ ಮಾರಾಟ ಮಾಡುವುದನ್ನು ನಿರ್ಬಂಧಿಸುವ ಖಾಯಿದೆ ರೂಪಿಸಬೇಕು. ರಾಜ್ಯದಲ್ಲಿ ಮದ್ಯ ನಿಷೇಧ ಮಾಡಬೇಕು. ಗ್ರಾಮ ಸಭೆಗಳ ಅನುಮತಿಯಿಲ್ಲದೇ ಗಣಿ ಭೋಗ್ಯ ನೀಡಬಾರದು ಎಂಬಿತ್ಯಾದಿ ಬೇಡಿಕೆಗಳನ್ನು ಅವರಿಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ