ತಿರುಪತಿ: ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ತಮ್ಮ ಕುಟುಂಬದೊಂದಿಗೆ ಗುರುವಾರ ಬೆಳಿಗ್ಗೆ ತಿರುಮಲದಲ್ಲಿರುವ ತಿರುಪತಿ ಬಾಲಾಜಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಬುಧವಾರ ಸಂಜೆ ತಿರುಮಲ ತಲುಪಿದ ಸಿಎಂ ನಾಯ್ಡು ಅವರಿಗೆ ದೇವಸ್ಥಾನದ ಅಧಿಕಾರಿಗಳಿಂದ ಆತ್ಮೀಯ ಸ್ವಾಗತ ಕೋರಿದರು.
ಭೇಟಿ ವೇಳೆ ಮುಖ್ಯಮಂತ್ರಿಯವರೊಂದಿಗೆ ಅವರ ಪತ್ನಿ ನಾರಾ ಭುವನೇಶ್ವರಿ, ಪುತ್ರ ಹಾಗೂ ರಾಜ್ಯ ಸಚಿವ ನಾರಾ ಲೋಕೇಶ್, ಲೋಕೇಶ್ ಅವರ ಪತ್ನಿ ನಾರಾ ಬ್ರಾಹ್ಮಣಿ, ಅವರ ಪುತ್ರ ದೇವಾಂಶ್ ಇದ್ದರು.
ಮುಖ್ಯಮಂತ್ರಿ ಆಗಮನದ ಹಿನ್ನೆಲೆಯಲ್ಲಿ ತಿರುಮಲ ದೇವಸ್ಥಾನದ ಹೊರಗೆ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು.
ದೇಗುಲ ದರ್ಶನದ ಬಳಿಕ ತಿರುಮಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ನಾಯ್ಡು ಅವರು, ''ನನ್ನ ಕುಟುಂಬ ಸದಸ್ಯರು ತಿರುಮಲ ವೆಂಕಟೇಶ್ವರನ ಭಕ್ತರು, ಯಾವುದೇ ಮಹತ್ವದ ನಿರ್ಧಾರ ಕೈಗೊಳ್ಳುವ ಮುನ್ನ ದೇವರ ದರ್ಶನ ಮಾಡುತ್ತೇನೆ. ರಾಜ್ಯದಲ್ಲಿ ಆಡಳಿತ ಆರಂಭವಾಗಿದೆ, ಶುದ್ಧೀಕರಣ ಆಗಬೇಕು. ಈ ಹಿಂದೆ ನಕ್ಸಲರಿಂದ ದಾಳಿಯಾದಾಗ ಭಗವಂತ ನನ್ನನ್ನು ರಕ್ಷಿಸಿದನು. ನಾನು ಈ ರಾಜ್ಯದ ಏಳಿಗೆಗಾಗಿ ಪ್ರಾರ್ಥಿಸಿದೆ ಎಂದು ಹೇಳಿದರು.
"ನನ್ನ ಮೊಮ್ಮಗ ದೇವಾಂಶ್ ಹುಟ್ಟಿದ ದಿನದಿಂದಲೂ ನಾನು ಅನ್ನದಾನಕ್ಕೆ (ಆಹಾರ ದಾನ) ಹಣವನ್ನು ನೀಡುತ್ತಿದ್ದೇನೆ. ನಾನು ಯಾವಾಗಲೂ ಬಡತನ ಮುಕ್ತ ಸಮಾಜಕ್ಕಾಗಿ ಕೆಲಸ ಮಾಡುತ್ತೇನೆ" ಎಂದು ನಾಯ್ಡು ಹೇಳಿದರು.