ಬೆಂಗಳೂರು: ಭಾರತ ದೇಶದ ಏಕತೆಗಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೈಗೊಳ್ಳುವ ಯಾವುದೇ ಕ್ರಮಕ್ಕೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡಲಿದೆ ಎಂದು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ದೇಶದ ಏಕತೆಗಾಗಿ ಮೋದಿ ಸರ್ಕಾರ ಕೈಗೊಳ್ಳುವ ಯಾವುದೇ ಕ್ರಮಕ್ಕೆ ಕಾಂಗ್ರೆಸ್ ಬೆಂಬಲ ನೀಡಲಿದೆ. ಆದರೆ, ಕೇಂದ್ರ ಸರ್ಕಾರ ಎಲ್ಲಾ ರಾಜಕೀಯ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ರಮ ಕೈಗೊಳ್ಳಬೇಕು ಎಂದು ಕಲಬುರಗಿಯಲ್ಲಿ ಅವರು ಹೇಳಿದರು.
ಪ್ರಧಾನಿಯವರು ಕೇವಲ ಭಾಷಣ ಮಾಡಿಕೊಂಡು ಕುಳಿತುಕೊಂಡರೆ ಸಾಲದು. ನಮ್ಮ ದೇಶದವರನ್ನು ಕೆಣಕಿದವರಿಗೆ ತಕ್ಕ ಉತ್ತರ ಕೊಡಬೇಕು. ಈ ವಿಚಾರದಲ್ಲಿ ರಾಜಕೀಯ ಆಗಬಾರದು. ನಮ್ಮ ದೇಶವನ್ನು ಅವಮಾನಿಸಿದರೆ ನಾವು ಮೌನವಾಗಿರಲು ಸಾಧ್ಯವಿಲ್ಲ. ನಮ್ಮ ದೇಶ ನಮಗೆ ಮುಖ್ಯವಾದ ಕಾರಣ ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಳ್ಳಲು ನಾವು ಬೆಂಬಲ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಈ ಹಿಂದೆ ಜಾತಿ ಜನಗಣತಿಯನ್ನು ಒತ್ತಾಯಿಸಿತ್ತು, ಈ ವೇಳೆ ಜಾತಿ ವಿಷ ಬೀಜ ಬಿತ್ತುತ್ತಿದ್ದಾರೆ ಎಂದು ನಮ್ಮನ್ನು ಹೀಯಾಳಿಸಿದ್ದರು. ಈಗ ಅವರೇ, ಜಾತಿ ಜನಗಣತಿ ಮಾಡಲು ಹೊರಟಿದ್ದಾರೆ. ಬಿಹಾರ ಚುನಾವಣೆ ಗಿಮಿಕ್ ಇರಬಹುದು. ಆ ಕುರಿತು ಮಾತನಾಡುವುದಿಲ್ಲ. ದುರುದ್ದೇಶದಿಂದ ನಡೆದುಕೊಂಡರೆ ಯಾರೂ ಸಹಿಸುವುದಿಲ್ಲ ಎಂದು ಎಂದು ಜಾತಿಗಣತಿ ಘೋಷಣೆ ಬಗ್ಗೆ ಹೇಳಿದರು.