ಗಡಿಯಲ್ಲಿ ಹೆಚ್ಚಿದ ಯುದ್ಧಭೀತಿ: ಪ್ರಧಾನಿ ಮೋದಿಯನ್ನು ತುರ್ತಾಗಿ ಭೇಟಿಯಾದ ವಾಯುಸೇನೆ ಮುಖ್ಯಸ್ಥ ಎ.ಪಿ. ಸಿಂಗ್

Sampriya

ಭಾನುವಾರ, 4 ಮೇ 2025 (14:12 IST)
ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ವಾಯುಸೇನೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಅವರು ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ನೌಕಾ ಪಡೆ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ ಸಹ ಶನಿವಾರ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಅರಬ್ಬೀ ಸಮುದ್ರದಲ್ಲಿ ಸದ್ಯದ ಪರಿಸ್ಥಿತಿ ಬಗ್ಗೆ ವಿವರಿಸಿದ್ದರು.  ಮೋದಿ ಜೊತೆ ಏರ್ ಚೀಫ್ ಮಾರ್ಷಲ್ ಸಭೆ ನಡೆಸಿದ್ದಾರೆ ಎಂದಷ್ಟೇ ಮೂಲಗಳು ತಿಳಿಸಿದ್ದು, ಆ ಕುರಿತಂತೆ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರು ಸಾವಿಗೀಡಾದ ಮರುದಿನ ನಡೆದ ಭದ್ರತೆ ಕುರಿತ ಸಂಪುಟ ಸಮಿತಿಯ (ಸಿಸಿಎಸ್‌) ಸಭೆಯಲ್ಲಿ ಉಗ್ರ ದಾಳಿಗೆ ಬಲವಾಗಿ ಪ್ರತಿಕ್ರಿಯಿಸಲು ತಂತ್ರ, ಗುರಿಗಳು ಮತ್ತು ಸಮಯವನ್ನು ನಿರ್ಧರಿಸಲು ಸರ್ಕಾರವು ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಕಾರ್ಯಾಚರಣೆಯ ಪರಮಾಧಿಕಾರವನ್ನು ನೀಡಿತ್ತು.

ಶುಕ್ರವಾರ ಉತ್ತರ ಪ್ರದೇಶದ ಗಂಗಾ ಎಕ್ಸ್‌ಪ್ರೆಸ್‌ವೇ ಉದ್ದಕ್ಕೂ ವಾಯುಪಡೆ ಫ್ಲೈಪಾಸ್ಟ್ ಮತ್ತು ಯುದ್ಧ ತಾಲೀಮನ್ನು ನಡೆಸಿತ್ತು. ಈ ತಾಲೀಮಿನ ಭಾಗವಾಗಿ, ಐಎಎಫ್ ಶಹಜಹಾನ್‌ಪುರದಲ್ಲಿರುವ 3.5 ಕಿ. ಮೀ ವ್ಯಾಪ್ತಿಯ ಏರ್‌ಸ್ಟ್ರಿಪ್‌ನಲ್ಲಿ ಟೇಕಾಫ್ ಮತ್ತು ಲ್ಯಾಂಡಿಂಗ್ ಕಾರ್ಯಾಚರಣೆಗಳನ್ನು ನಡೆಸಿತ್ತು. ಇದು ನಿರ್ಮಾಣ ಹಂತದಲ್ಲಿರುವ ಗಂಗಾ ಎಕ್ಸ್‌ಪ್ರೆಸ್‌ವೇ ಯೋಜನೆಯ ಭಾಗವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ