ನವದೆಹಲಿ : ದೇಶದ ಲಸಿಕಾ ಅಭಿಯಾನ 'ವಿಜ್ಞಾನದಿಂದ ಹುಟ್ಟಿದ, ವಿಜ್ಞಾನ ಮುನ್ನಡೆಸಿದ ಮತ್ತು ವಿಜ್ಞಾನ ಆಧಾರಿತ ಕಾರ್ಯಕ್ರಮವಾಗಿದೆ' ಎಂದು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಅಭಿಯಾನದ ವೇಗ ಮತ್ತು ಪ್ರಮಾಣ ದೇಶದ ಒಳಗಿನ ಮತ್ತು ದೇಶದ ಹೊರಗಿನ ಟೀಕಾಕಾರರ ಬಾಯಿ ಮುಚ್ಚಿಸಿದೆ ಎಂದರು.
ಕೋವಿಡ್ ವಿರುದ್ಧದ ಲಸಿಕಾ ಅಭಿಯಾನದಲ್ಲಿ ದೇಶವು 100 ಕೋಟಿ ಡೋಸ್ಗಳ ಮೈಲಿಗಲ್ಲು ತಲುಪಿದ ಹಿನ್ನೆಲೆಯಲ್ಲಿ ಅವರು ದೇಶವನ್ನು ಉದ್ದೇಶಿಸಿ ಶುಕ್ರವಾರ ಭಾಷಣ ಮಾಡಿದರು. ಲಸಿಕೆಯ ಅಗತ್ಯ ಮತ್ತು ದೇಶದ ಆರ್ಥಿಕತೆ ಕುರಿತು ಆಶಾಭಾವನೆ ಮತ್ತು ಭರವಸೆ ಮೂಡುತ್ತಿರುವ ಕುರಿತು ಮಾತನಾಡಿದರು.
ಈ ಸಾಧನೆ ಭಾರತದ ಸಾಮರ್ಥ್ಯವನ್ನು ಪ್ರಶ್ನಿಸುತ್ತಿದ್ದವರ ಬಾಯಿ ಮುಚ್ಚಿಸಿದೆ. ಅಲ್ಲದೇ, 'ನವ ಭಾರತ' ಕಷ್ಟಕರ ಗುರಿ ನಿಗದಿಪಡಿಸಿಕೊಂಡು ಅದನ್ನು ಸಾಧಿಸುತ್ತದೆ ಎಂಬುದನ್ನು ಈ ಲಸಿಕಾ ಅಭಿಯಾನ ತೋರಿಸಿಕೊಟ್ಟಿದೆ ಎಂದರು.
ಪ್ರತಿಪಕ್ಷಗಳ ಟೀಕೆಗಳ ವಿರುದ್ಧ ಹರಿಹಾಯ್ದ ಅವರು, ಚಪ್ಪಾಳೆ ತಟ್ಟುವುದರಿಂದ ಮತ್ತು ದೀಪ ಹಚ್ಚುವುದರಿಂದ ಹೇಗೆ ವೈರಸ್ ನಾಶ ಆಗುತ್ತದೆ ಎಂದು ಸಾಂಕ್ರಾಮಿಕದ ಆರಂಭಿಕ ದಿನಗಳಲ್ಲಿ ಟೀಕೆ ಮಾಡುತ್ತಿದ್ದರು. ಈ ಕ್ರಮಗಳು ಜನರ ಭಾಗವಹಿಸುವಿಕೆ ಮತ್ತು ಒಗ್ಗಟ್ಟನ್ನು ತೋರುತ್ತವೆ. 100 ಕೋಟಿ ಡೋಸ್ ಲಸಿಕೆ ನೀಡಿರುವುದು ಇತಿಹಾಸದಲ್ಲಿ ಹೊಸ ಅಧ್ಯಾಯವಾಗಿದೆ ಮತ್ತು ಇದು ದೇಶದ ಸಾಮರ್ಥ್ಯವನ್ನು ಪ್ರತಿಫಲಿಸುತ್ತದೆ. ಭಾರತದ ಲಸಿಕಾ ಅಭಿಯಾನ 'ಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್' ಘೋಷಣೆಯ ಅತ್ಯಂತ ಪರಿಣಾಮಕಾರಿ ಉದಾಹರಣೆ ಆಗಿದೆ ಎಂದರು.