ಗ್ಯಾಸ್ ಚೇಂಬರ್ ನಿರ್ಮಿಸಿ ತಾಯಿ-ಮಕ್ಕಳು ಆತ್ಮಹತ್ಯೆ
ತಾಯಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಗ್ಯಾಸ್ ಸಿಲಿಂಡರ್ ಆನ್ ಮಾಡಿ ಆತ್ಮಹತ್ಯೆ ಮಾಡಿಕೊಂಡ ರೀತಿಗೆ ಇಡೀ ದೆಹಲಿ ಬೆಚ್ಚಿಬಿದ್ದಿದೆ.
ವಸಂತ ವಿಹಾರ್ ನಗರದ ನಿವಾಸಿಗಳಾದ ಮಂಜು ಹಾಗೂ ಮಕ್ಕಳಾದ ಆಶಿಕಾ ಮತ್ತು ಅಂಕು ಮೃತಪಟ್ಟ ದುರ್ದೈವಿಗಳು.
ಮನೆಯೊಂದರಲ್ಲಿ 50 ವರ್ಷದ ತಾಯಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಮನೆಯ ಕಿಟಕಿ ಹಾಗೂ ಬಾಗಿಲುಗಳನ್ನು ಮುಚ್ಚಿದ್ದೂ ಅಲ್ಲದೇ ಹೊರಗೆ ಗಾಳಿ ಹೋಗದಂತೆ ಪ್ಲಾಸ್ಟಿಕ್ ಗಳಿಂದ ಮುಚ್ಚಿದ್ದಾರೆ.
ನಂತರ ಗ್ಯಾಸ್ ಸಿಲಿಂಡರ್ ಆನ್ ಮಾಡಿ ಕಲ್ಲಿದ್ದಲ್ಲು ಉರಿಸಿ ಅದರಿಂದ ಬಿಡುಗಡೆ ಆಗುವ ಕಾರ್ಬನ್ ಮೊನಾಕ್ಸೈಡ್ ಎಂಬ ವಿಷಕಾರಿ ಅನಿಲದಿಂದ ಮೂವರು ಮೃತಪಟ್ಟಿದ್ದಾರೆ.
ಡೆತ್ ನೋಟ್ ನಲ್ಲಿ ಮನೆಯ ಒಳಗೆ ಬರುವವರು ಲೈಟ್ ಸ್ವಿಚ್ ಆನ್ ಮಾಡಬೇಡಿ. ಇದರಿಂದ ಬೆಂಕಿ ಹೊತ್ತಿಕೊಂಡು ನಿಮ್ಮ ಜೀವಕ್ಕೆ ಅಪಾಯ ಆಗುವ ಸಾಧ್ಯತೆ ಇದೆ ಎಂದು ಸ್ಪಷ್ಟವಾಗಿ ವಿವರಿಸಲಾಗಿದೆ.
ನೆರೆಹೊರೆಯವರು ನೀಡಿದ ಮಾಹಿತಿ ಮೇಲೆ ಮನೆಯ ಬಾಗಿಲು ಒಡೆದು ನೋಡಿದ ಪೊಲೀಸರಿಗೆ ಈ ಘಟನೆ ಆಘಾತ ತಂದಿದೆ.
ಮಂಜು ಅವರ ಪತಿ ಕಳೆದ ವರ್ಷ ಕೋವಿಡ್ ನಿಂದ ಮೃತಪಟ್ಟಿದ್ದರು. ಅಂದಿನಿಂದ ಕುಟುಂಬದವರು ನೋವಿನಲ್ಲಿದ್ದರು. ಮಂಜು ಕೂಡ ಅಸ್ವಸ್ಥಗೊಂಡಿದ್ದು, ಹಾಸಿಗೆ ಹಿಡಿದರೆ ಗತಿ ಏನು ಎಂದು ಆತಂಕಗೊಂಡಿದ್ದರು ಎಂದು ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.