ಪತ್ನಿ ಸ್ಥಾಪಿಸಿದ ಪಕ್ಷ ಒಲ್ಲೆನೆಂದು ತನ್ನದೇ ಪಾರ್ಟಿ ಸ್ಥಾಪನೆಗೆ ಮುಂದಾದ ದೀಪಾ ಜಯಕುಮಾರ್ ಪತಿ!
ಶನಿವಾರ, 18 ಮಾರ್ಚ್ 2017 (09:31 IST)
ಚೆನ್ನೈ: ರಾಜಕೀಯದಲ್ಲಿ ಏನೆಲ್ಲಾ ಆಗುತ್ತದೆ ಎನ್ನುವುದಕ್ಕೆ ಇದು ಮತ್ತೊಂದು ಸಾಕ್ಷಿ. ಎಎಐಎಡಿಎಂಕೆ ಮುಖ್ಯಸ್ಥೆ ಶಶಿಕಲಾ ನಟರಾಜನ್ ಬಣದ ವಿರುದ್ಧ ಬಂಡಾಯವೆದ್ದು ತನ್ನದೇ ಪಕ್ಷ ಸ್ಥಾಪಿಸಿದ್ದ ಜಯಲಲಿತಾ ಸೊಸೆ ದೀಪಾ ಜಯಕುಮಾರ್ ವಿರುದ್ಧ ಪತಿ ಮಾಧವನ್ ತಿರುಗಿಬಿದ್ದಿದ್ದಾರೆ.
ಆದರೆ ಪತ್ನಿಯ ವಿರುದ್ಧಅವರಿಗೆ ಯಾವುದೇ ಅಸಮಾಧಾನವಿಲ್ಲವಂತೆ! ತನ್ನ ಪತ್ನಿ ಸ್ಥಾಪಿಸಿದ ಎಂಜಿಆರ್ ಅಮ್ಮ ದೀಪಾ ಪಿರವೈ ಪಕ್ಷದಲ್ಲಿ ಈಗ ಕೆಟ್ಟ ಶಕ್ತಿಗಳದ್ದೇ ಕಾರುಬಾರು ಆಗ್ತಿದೆ. ಅದಕ್ಕೇ ಪತ್ನಿಯ ಪಕ್ಷ ಬಿಟ್ಟು ತನ್ನದೇ ಸ್ವತಂತ್ರ ಪಕ್ಷ ಸ್ಥಾಪಿಸುತ್ತಿರುವುದಾಗಿ ಮಾಧವನ್ ಘೋಷಿಸಿದ್ದಾರೆ.
ವಿಚಿತ್ರವೆಂದರೆ, ಮಾಧವನ್ ಕೂಡಾ ಈ ನಿರ್ಧಾರವನ್ನು ಅಮ್ಮ ಜಯಲಲಿತಾ ಸಮಾಧಿಗೆ ಭೇಟಿ ಕೊಟ್ಟ ನಂತರ ಘೋಷಿಸಿದ್ದಾರೆ. ಸದ್ಯಕ್ಕೆ ತಮಿಳುನಾಡಿನ ಎಲ್ಲಾ ರಾಜಕೀಯ ನಿರ್ಧಾರಗಳು ಅಮ್ಮನ ಸಮಾಧಿಗೆ ಭೇಟಿ ಕೊಟ್ಟ ನಂತರವೇ ಶುರುವಾಗುತ್ತಿದೆ. ಮಾಧವನ್ ಕೂಡಾ ಇದೇ ಹಾದಿ ಹಿಡಿದಿದ್ದಾರೆ.
ಹಾಗಿದ್ದರೆ, ಆರ್ ಕೆ ನಗರ ಉಪ ಚುನಾವಣೆಯಲ್ಲಿ ಪತ್ನಿ ದೀಪಾ ಎದುರು ಸ್ಪರ್ಧಿಸುತ್ತೀರಾ ಎಂದು ಕೇಳಿದ್ದಕ್ಕೆ, ಪಕ್ಷದ ಕಾರ್ಯಕರ್ತರೊಂದಿಗೆ ಚರ್ಚಿಸಿ ತೀರ್ಮಾನಿಸುವುದಾಗಿ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ