ನವದೆಹಲಿ: ಕೊರೋನಾ ಪ್ರಕರಣದಲ್ಲಿ ವಿಪರೀತ ಏರಿಕೆಯಾಗಿರುವುದರಿಂದ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಯಾಗುತ್ತಿದೆ. ಇದೀಗ ದೆಹಲಿಯ ಆಸ್ಪತ್ರೆಯೊಂದರ ಮುಖ್ಯಸ್ಥರು ಆಕ್ಸಿಜನ್ ಕೊರತೆ ಬಗ್ಗೆ ಹೇಳುತ್ತಾ ಭಾವುಕರಾದ ಘಟನೆ ನಡೆದಿದೆ.
ಮಾಧ‍್ಯಮಗಳ ಮುಂದೆ ತಮ್ಮ ಆಸ್ಪತ್ರೆಯಲ್ಲಿ ಇನ್ನು ಎರಡು ಗಂಟೆಗಳಲ್ಲಿ ಆಕ್ಸಿಜನ್ ಖಾಲಿಯಾಗಲಿದೆ ಎನ್ನುತ್ತಾ ದೆಹಲಿಯ ಶಾಂತಿ ಮುಕುಂದ್ ಆಸ್ಪತ್ರೆಯ ಸಿಇಒ ಸುನಿಲ್ ಸಾಗರ್ ಗದ್ಗತಿತರಾದರು.
ಕೊರೋನಾ ಅಲ್ಲದೆ, ನಮ್ಮಲ್ಲಿ ಬೇರೆ ಬೇರೆ ರೋಗಿಗಳಿದ್ದಾರೆ. 85 ಕ್ಕೂ ಹೆಚ್ಚು ರೋಗಿಗಳಿಗೆ ಆಕ್ಸಿಜನ್ ಅಗತ್ಯವಿದ್ದು, ಪ್ರತಿ ನಿಮಿಷಕ್ಕೆ 5 ಲೀ. ನಷ್ಟು ಆಕ್ಸಿಜನ್ ಬೇಕು. ಆದರೆ ನಮ್ಮಲ್ಲಿ ಇನ್ನು ಎರಡು ಗಂಟೆ ಕಳೆದರೆ ಆಕ್ಸಿಜನ್ ಖಾಲಿಯಾಗುತ್ತದೆ. ಹೀಗಾಗಿ ರೋಗಿಗಳನ್ನು ಡಿಸ್ಚಾರ್ಜ್ ಮಾಡಲು ಸೂಚಿಸಿದ್ದೇನೆ. ವೈದ್ಯರು ರೋಗಿಗಳ ಜೀವ ಉಳಿಸುವ ಆಪತ್ಬಾಂಧವರು. ಆದರೆ ನಾವೀಗ ಅಸಹಾಯಕರು ಎನ್ನುತ್ತಾ ಅವರು ಕಣ್ಣೀರು ಹಾಕಿದ್ದಾರೆ.