ನವದೆಹಲಿ : ಇನ್ಮುಂದೆ ಒಂದೇ ಅಥವಾ ಪ್ರತ್ಯೇಕ ವಿಶ್ವವಿದ್ಯಾಲಯಗಳಿಂದ ಏಕಕಾಲಕ್ಕೆ ಎರಡು ಪದವಿ (ಎರಡು ಡಿಗ್ರಿ) ಪಡೆಯಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುತ್ತದೆ,
ವಿಶ್ವವಿದ್ಯಾಲಯದ ಅನುದಾನ ಆಯೋಗ ಅಧ್ಯಕ್ಷ ಜಗದೀಶ್ ಕುಮಾರ್ ಮಂಗಳವಾರ ಘೋಷಿಸಿದ್ದಾರೆ. ಯುಜಿಸಿ ಈ ಕುರಿತಂತೆ ಶೀಘ್ರದಲ್ಲೇ ವಿವರವಾದ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಿದೆ ಎಂದು ತಿಳಿಸಿದ್ದಾರೆ.
ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಿದಂತೆ, ವಿದ್ಯಾರ್ಥಿಗಳಿಗೆ ಹೊಸ ಹೊಸ ಕೌಶಲಗಳನ್ನು ಕಲಿಯುವ ಅವಕಾಶ ನೀಡುವ ಉದ್ದೇಶದಿಂದ ಏಕಕಾಲದಲ್ಲಿ ಎರಡು ಪದವಿಯನ್ನು ಪೂರ್ಣಗೊಳಿಸುವ ಅವಕಾಶ ನೀಡಲು ಯುಜಿಸಿ ನಿರ್ಧರಿಸಿದೆ.
ಪದವಿಯನ್ನು ಒಂದೇ ವಿಶ್ವವಿದ್ಯಾಲಯದಿಂದ ಅಥವಾ ಪ್ರತ್ಯೇಕ ವಿಶ್ವವಿದ್ಯಾಲಯದಿಂದ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ. ಹಾಗೆಯೇ ವಿದ್ಯಾರ್ಥಿಗಳು ಆನ್ಲೈನ್ ಅಥವಾ ರೆಗ್ಯೂಲರ್ ತಮ್ಮ ಆಯ್ಕೆಯನುಸಾರ ಯಾವುದೇ ಪದವಿಯನ್ನು ಪಡೆಯಬಹುದಾಗಿದೆ.
ಹೊಸ ನಿಯಮದ ಪ್ರಕಾರ ಉದಾಹರಣೆಗೆ ಬಿ.ಕಾಂ ಓದುವ ವಿದ್ಯಾರ್ಥಿ ಏಕಕಾಲಕ್ಕೆ ಬಿಎಸ್ಸಿ ಅಥವಾ ಬಿ.ಎ ಪದವಿಯನ್ನೂ ಪಡೆಯಬಹುದು. ಈ ನಿಯಮ ಮುಂಬರುವ ಶೈಕ್ಷಣಿಕ ಸಾಲಿನಿಂದಲೇ ಅನ್ವಯವಾಗಲಿದ್ದು, ಈಗಾಗಲೇ ದ್ವಿತೀಯ ಅಥವಾ ತೃತೀಯ ವರ್ಷದ ಪದವಿ ವಿದ್ಯಾರ್ಥಿಗಳೂ ಇನ್ನೊಂದು ಪದವಿ ಪಡೆಯಬಹುದು.