ಮಹೇಂದ್ರಗಢ: ಹರಿಯಾಣದ ಮಹೇಂದ್ರಗಢ ಜಿಲ್ಲೆಯ ಕನಿನಾ ಪಟ್ಟಣದಲ್ಲಿ ಗುರುವಾರ ಖಾಸಗಿ ಶಾಲಾ ಬಸ್ ಪಲ್ಟಿಯಾದ ಪರಿಣಾಮ ಐವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಮತ್ತು 15 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿಹಾಲ್ ಆಸ್ಪತ್ರೆಯ ವೈದ್ಯ ಡಾ ರವಿ ಕೌಶಿಕ್ ಪ್ರತಿಕ್ರಿಯಿಸಿ, ಐವರು ವಿದ್ಯಾರ್ಥಿಗಳನ್ನು ಕರೆತರಲಾಯಿತು, ಅದರಲ್ಲಿ ಒಬ್ಬ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ. ಗಾಯಗೊಂಡ 15 ವಿದ್ಯಾರ್ಥಿಗಳನ್ನು ಮತ್ತೊಂದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಾಲಕ ಕುಡಿದ ಅಮಲಿನಲ್ಲಿ ಬಸ್ ಚಾಲನೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
"ಘಟನೆಯ ಮಾಹಿತಿ ಪಡೆದ ನಂತರ, ನಾವು ಸ್ಥಳಕ್ಕೆ ತಲುಪಿದ್ದೇವೆ. ಚಾಲಕ ಮದ್ಯಪಾನ ಮಾಡಿರುವು ತಿಳಿದುಬಂದಿದೆ. ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಮಹೇಂದ್ರಗಢ ಸ್ಟೇಷನ್ ಹೌಸ್ ಆಫೀಸರ್ ಉದಯ್ ಭಾನ್ ಹೇಳಿದರು.
ಬಸ್ ಅತಿವೇಗದಿಂದ ಬಂದು ಕಾಲುವೆಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಅಪಘಾತದಲ್ಲಿ ಗಾಯಗೊಂಡ ವಿದ್ಯಾರ್ಥಿಯೊಬ್ಬರು ತಿಳಿಸಿದ್ದಾರೆ.
"ಚಾಲಕ ಪಾನಮತ್ತನಾಗಿದ್ದರಿಂದ ಬಸ್ ಅತಿವೇಗದ ಚಾಲನೆಯಾಗಿತ್ತು. ಚಾಲಕ ತಿರುವು ಪಡೆಯಲು ಯತ್ನಿಸಿದ ಕೂಡಲೇ ಬಸ್ ಕಾಲುವೆಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಬಸ್ಸಿನಲ್ಲಿ 50 ವಿದ್ಯಾರ್ಥಿಗಳಿದ್ದರು" ಎಂದು ವಿದ್ಯಾರ್ಥಿ ಪೊಲೀಸರಿಗೆ ತಿಳಿಸಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.