ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ತುರ್ತು ಸಭೆ

ಶನಿವಾರ, 16 ಸೆಪ್ಟಂಬರ್ 2023 (07:27 IST)
ನವದೆಹಲಿ : ಕರ್ನಾಟಕದಿಂದ ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರಕ್ಕೆ ಸಂಬಂಧಿಸದಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೆ.18 ರಂದು ತುರ್ತು ಸಭೆ ಕರೆದಿದೆ. ಕಾವೇರಿ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವಂತೆ ಸಿಎಂ ಸಿದ್ದರಾಮಯ್ಯ, ಕೇಂದ್ರ ಜಲ ಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ಗೆ ಪತ್ರ ಬರೆದ ಬೆನ್ನಲ್ಲೇ ತುರ್ತು ಸಭೆಗೆ ದಿನಾಂಕ ನಿಗದಿಯಾಗಿದೆ.

ಪ್ರಾಧಿಕಾರದ ಅಧ್ಯಕ್ಷ ಎಸ್.ಕೆ. ಹಲ್ದಾರ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಅಚ್ಚುಕಟ್ಟು ಪ್ರದೇಶದ ಎಲ್ಲ ರಾಜ್ಯದ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ತಮಿಳುನಾಡಿಗೆ ಹದಿನೈದು ದಿನಗಳ ಕಾಲ ನಿತ್ಯ ಐದು ಸಾವಿರ ಕ್ಯೂಸೆಕ್ ನೀರು ಹರಿಸಲು ಕಾವೇರಿ ನೀರು ನಿಯಂತ್ರಣ ಸಮಿತಿ ಮೂರನೇ ಬಾರಿಗೆ ಆದೇಶ ನೀಡಿದ ಬಳಿಕ ಈ ಸಭೆ ನಡೆಯುತ್ತಿದ್ದು, ಸಾಕಷ್ಟು ಮಹತ್ವ ಪಡೆದುಕೊಂಡಿದೆ.

ಪ್ರಾಧಿಕಾರದ ಸಭೆಯಲ್ಲಿ ನೀರು ನಿಯಂತ್ರಣ ಸಮಿತಿಯ ಆದೇಶವನ್ನು ಕರ್ನಾಟಕ ಪ್ರಶ್ನಿಸಲಿದೆ. ಅಚ್ಚುಕಟ್ಟು ಪ್ರದೇಶದಲ್ಲಿರುವ ಅಣೆಕಟ್ಟುಗಳಲ್ಲಿ ನೀರಿನ ಕೊರತೆ ಅಗಾಧವಾಗಿದ್ದು, ನೀರು ಹರಿಸಲು ನೀರು ನಿಯಂತ್ರಣ ಸಮಿತಿ ನಿರಂತರ ಆದೇಶ ನೀಡುತ್ತಿದೆ. ಇದರಿಂದ ಭವಿಷ್ಯದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಲಿದೆ ಎಂದು ಆಕ್ಷೇಪ ವ್ಯಕ್ತಪಡಿಸುವ ಸಾಧ್ಯತೆ ಇದೆ.

ಸೆ.21 ರಂದು ಸುಪ್ರೀಂ ಕೋರ್ಟ್ನಲ್ಲಿ ಪ್ರಕರಣ ವಿಚಾರಣೆಗೆ ಬರಲಿದೆ. ಅದಕ್ಕೂ ಮುನ್ನ ಸಭೆ ನಡೆಸಿ, ಸಭೆಯ ನಿರ್ಧಾರವನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಲು ಪ್ರಾಧಿಕಾರ ನಿರ್ಧರಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ