ಇಂದು ಕಾವೇರಿ ನೀರು ನಿಯಂತ್ರಣಾ ಸಮಿತಿ ಹೈವೋಲ್ಟೇಜ್ ಸಭೆ

ಮಂಗಳವಾರ, 12 ಸೆಪ್ಟಂಬರ್ 2023 (10:53 IST)
ಮಂಡ್ಯ : ತೀವ್ರ ವಿರೋಧದ ನಡುವೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹೇಳಿದ ಹಾಗೆ ತಮಿಳುನಾಡಿಗೆ ರಾಜ್ಯ ಸರ್ಕಾರ 75,000 ಕ್ಯೂಸೆಕ್ ನೀರು ಬಿಟ್ಟಿದ್ದು ಆಗಿದೆ. ಇಂದು ಕಾವೇರಿ ನದಿ ನೀರು ನಿಯಂತ್ರಣಾ ಸಮಿತಿ ದೆಹಲಿಯಲ್ಲಿ ಪ್ರಾಧಿಕಾರ ಕರ್ನಾಟಕ ಹಾಗೂ ತಮಿಳುನಾಡಿನ ನೀರು ಹಂಚಿಕೆಯ ವಿವಾದದ ಸಂಬಂಧ ಹೈವೋಲ್ಟೇಜ್ ಸಭೆ ನಡೆಸಲಿದೆ.

ಕಳೆದ ಆಗಸ್ಟ್ 29ರಂದು ದೆಹಲಿಯಲ್ಲಿ ನಡೆದ ಕಾವೇರಿ ನೀರು ಪ್ರಾಧಿಕಾರ ಸಭೆಯಲ್ಲಿ ಕರ್ನಾಟಕ ಸರ್ಕಾರಕ್ಕೆ 15 ದಿನಗಳ ಕಾಲ ನಿತ್ಯ 5,000 ಕ್ಯೂಸೆಕ್ ಅಂದರೆ ಒಟ್ಟು 75,000 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡಬೇಕೆಂದು ಸೂಚನೆ ನೀಡಲಾಗಿತ್ತು.

ಪ್ರಾಧಿಕಾರ ಸೂಚನೆಯಂತೆ ರಾಜ್ಯ ಸರ್ಕಾರ ರೈತರ ತೀವ್ರ ವಿರೋಧದ ನಡುವೆಯೂ ಹತ್ತೇ ದಿನಕ್ಕೆ ತಮಿಳುನಾಡಿಗೆ ಮಳೆ ನೀರು ಸೇರಿದಂತೆ ಕೆಆರ್ಎಸ್ ಡ್ಯಾಂನಿಂದ 75,000 ಕ್ಯೂಸೆಕ್ ನೀರು ಬಿಟ್ಟಿದೆ. ಸದ್ಯ ಕಾವೇರಿ ನೀರು ಹಂಚಿಕೆ ವಿವಾದದ ವಿಚಾರಣೆ ಸೆ.21ಕ್ಕೆ ಸುಪ್ರೀಂಕೋರ್ಟ್ನಲ್ಲಿ ನಡೆಯಲಿದೆ.
ಈ ನಡುವೆ ಇಂದು ಕಾವೇರಿ ನೀರು ನಿಯಂತ್ರಣಾ ಸಮಿತಿ ದೆಹಲಿಯಲ್ಲಿ ಹೈವೋಲ್ಟೇಜ್ ಸಭೆ ನಡೆಸಲಿದೆ. ಈ ಸಭೆಯಲ್ಲಿ ಸಮಿತಿ ಅಧಿಕಾರಿಗಳು ಹಾಗೂ ಎರಡೂ ರಾಜ್ಯದ ನೀರಾವರಿ ತಜ್ಞರು, ವಕೀಲರು ಮತ್ತು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಇರಲಿದ್ದಾರೆ.

ಆಗಸ್ಟ್ 29ರಂದು ನಡೆದ ಪ್ರಾಧಿಕಾರದ ಸಭೆಯಲ್ಲಿ ಆದ ನಿರ್ಣಯಗಳನ್ನು ಕರ್ನಾಟಕ ಸರ್ಕಾರ ಚಾಚು ತಪ್ಪದೇ ಪಾಲಿಸಿದೆ. ಹೀಗಿದ್ದರೂ ಸಹ ತಮಿಳುನಾಡು ನಮಗೆ ಈಗ ಬಿಟ್ಟಿರುವ ನೀರು ಸಾಲಲ್ಲ. ಇನ್ನೂ 10 ದಿನಗಳ ಕಾಲ 24,000 ಕ್ಯೂಸೆಕ್ ನೀರು ಹರಿಸುವಂತೆ ಬೇಡಿಕೆ ಇಡಲು ತಯಾರು ಮಾಡಿಕೊಂಡಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ