ಜಮ್ಮು ಮತ್ತು ಕಾಶ್ಮೀರ: ಇಲ್ಲಿನ ದೋಡಾದಲ್ಲಿ ಉಗ್ರರ ಜೊತೆ ನಡೆಸಿದ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಯ ಓರ್ವ ಸೇನಾಧಿಕಾರಿ ಮತ್ತು ಮೂವರು ಸೈನಿಕರು ಪ್ರಾಣ ತ್ಯಾಗ ಮಾಡಿದ್ದಾರೆ.
ದೋಡಾದಿಂದ 30 ಕಿ.ಮೀ. ದೂರದಲ್ಲಿರುವ ಕೋಟಿ ಗ್ರಾಮದ ಶಿಯಾ ಧಾರ್ ಚೌಂಡ್ ಮಾತಾ ಪ್ರದೇಶದಲ್ಲಿ ಭಯೋತ್ಪಾದಕರು ಇರುವ ಬಗ್ಗೆ ಮಾಹಿತಿ ಪಡೆದ ಸೈನಿಕರು ಪ್ರದೇಶವನ್ನು ಸುತ್ತುವರಿದಿದ್ದಾರೆ. ಈ ವೇಳೆ ಭಯೋತ್ಪಾದಕರ ಜೊತೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ.
ಐವರು ಯೋಧರಿಗೆ ಗಂಭೀರವಾಗಿ ಗಾಯವಾಗಿದೆ ಎಂದು ವರದಿಯಾಗಿದೆ. ನಿನ್ನೆ ರಾತ್ರಿ 7.45 ರ ಸುಮಾರಿಗೆ ದಾಳಿ ಆರಂಭವಾಗಿತ್ತು. ಸುಮಾರು 20 ನಿಮಿಷಗಳ ಕಾಲ ಗುಂಡಿನ ದಾಳಿ ಮುಂದುವರಿದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳದಲ್ಲಿ ಈಗ ಹೆಚ್ಚಿನ ಭದ್ರತೆ ನಿಯೋಜಿಸಲಾಗಿದೆ. ದೋಡಾ ಪ್ರದೇಶ ಈಗ ಉಗ್ರರ ಅಡಗುತಾಣವಾಗುತ್ತಿದೆ ಎಂಬುದು ಆತಂಕಕಾರೀ ವಿಷಯವಾಗಿದೆ. ಕಳೆದ 35 ದಿನಗಳಲ್ಲಿ ನಾಲ್ಕನೇ ಬಾರಿಗೆ ಎನ್ ಕೌಂಟರ್ ನಡೆದಿದೆ. ಭದ್ರತಾ ಪಡೆಗಳು ಈಗ ಇಲ್ಲಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.