ಮಾಲ್ಡೀವ್ಸ್: ಮೇ 10 ರ ಬಳಿಕ ಭಾರತೀಯ ಸೇನೆಯ ಯಾರೂ ನಮ್ಮ ದೇಶದಲ್ಲಿ ಇರಬಾರದು ಎಂದು ಮಾಲ್ಡೀವ್ಸ್ ಅಧ‍್ಯಕ್ಷ ಮೊಹಮ್ಮದ್ ಮೊಯಿಝು ಮತ್ತೊಮ್ಮೆ ಗುಟುರು ಹಾಕಿದ್ದಾರೆ.
ಇತ್ತೀಚೆಗೆ ಭಾರತದ ಜೊತೆಗೆ ಸಂಬಂಧ ಹಳಸಿದ ಬೆನ್ನಲ್ಲೇ ಮಾಲ್ಡೀವ್ಸ್ ಚೀನಾ ಜೊತೆ ಕೈ ಜೋಡಿಸಿತ್ತು. ತನ್ನ ನೆಲದಲ್ಲಿದ್ದ ಭಾರತೀಯ ಸೈನಿಕರನ್ನು ತೆರವುಗೊಳಿಸಲು ಸೂಚಿಸಿತ್ತು. ಇದರ ಬೆನ್ನಲ್ಲೇ ಭಾರತ-ಮಾಲ್ಡೀವ್ಸ್ ನಡುವಿನ ಸಂಬಂಧ ಹದಗೆಡಲು ಶುರುವಾಗಿತ್ತು. ಇದಕ್ಕೆಲ್ಲಾ ಚೀನಾ ಜೊತೆಗಿನ ಬಾಂಧವ್ಯವೇ ಕಾರಣ ಎಂಬ ಮಾತುಗಳೂ ಇವೆ.
ಇದೀಗ ಮತ್ತೊಮ್ಮೆ ಭಾರತೀಯ ಸೈನಿಕರು ಸಮವಸ್ತ್ರದಲ್ಲಿ ಅಥವಾ ಸಾಮಾನ್ಯ ದಿರಿಸಿನಲ್ಲಿಯೇ ಸರಿ ನಮ್ಮ ದೇಶದಲ್ಲಿ ಮೇ 10 ರ ಬಳಿಕ ಇರಕೂಡದು ಎಂದು ಮೊಹಮ್ಮದ್ ಮೊಯಿಝು ಆದೇಶಿಸಿದ್ದಾರೆ. ಭಾರತೀಯ ಸೈನಿಕರು ನಮ್ಮ ದೇಶದಿಂದ ಹೋಗಲ್ಲ. ಮತ್ತೆ ಸಮವಸ್ತ್ರ ಬಿಟ್ಟು ಸಾಮಾನ್ಯ ದಿರಿಸಿನಲ್ಲಿ ಇಲ್ಲಿಯೇ ಇರಲಿದ್ದಾರೆ ಎಂಬಿತ್ಯಾದಿ ಸುದ್ದಿಗಳು ಹರಡುತ್ತಿವೆ. ಆದರೆ ಇದೆಲ್ಲಾ ಸುಳ್ಳು. ಯಾರೂ ಮೇ 10 ರ ನಂತರ ನಮ್ಮ ದೇಶದಲ್ಲಿ ಇರಬಾರದು ಎಂದಿದ್ದಾರೆ.
ಭಾರತೀಯ ಸೈನಿಕರು ಮಾಲ್ಡೀವ್ಸ್ ನಲ್ಲಿ ಮಾನವೀಯ ಮತ್ತು ವೈದ್ಯಕೀಯ ತುರ್ತು ಸಂದರ್ಭದಲ್ಲಿ ಸಹಾಯ ಮಾಡುವುದು ಇತ್ಯಾದಿ ಕೆಲಸಗಳನ್ನು ಮಾಡುತ್ತಿದ್ದಾರೆ. ಆದರೆ ಮಾಲ್ಡೀವ್ಸ್ ಈಗ ಈ ಕೆಲಸಗಳಿಗೆ ಶ್ರೀಲಂಕಾ ಸೇನೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಆ ಮೂಲಕ ಭಾರತೀಯ ಸೇನೆಗೆ ನಿಮ್ಮ ಅಗತ್ಯವಿಲ್ಲ ಎಂದು ಪರೋಕ್ಷವಾಗಿ ಸೂಚಿಸಿದೆ.