ಅಲಹಾಬಾದ್: ವಾರಣಾಸಿಯ ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಹಿಂದೂಗಳಿಗೆ ಪೂಜೆಗೆ ಅವಕಾಶ ಮಾಡಿಕೊಟ್ಟಿರುವುದನ್ನು ಪ್ರಶ್ನಿಸಿ ಮುಸ್ಲಿಮರು ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ.
ಈ ಮೂಲಕ ಮುಸ್ಲಿಮರಿಗೆ ಮತ್ತೊಮ್ಮೆ ಹಿನ್ನಡೆಯಾಗಿದ್ದು, ಹಿಂದೂಗಳಿಗೆ ಪೂಜೆ ಸಲ್ಲಿಸಲು ಅನುಮತಿ ನೀಡಲಾಗಿದೆ. ಇದರೊಂದಿಗೆ ನೆಲಮಾಳಿಗೆಯಲ್ಲಿ ಹಿಂದೂಗಳ ಪೂಜೆ ಮುಂದುವರಿಯಲಿದೆ. ಜಿಲ್ಲಾ ನ್ಯಾಯಾಲಯ ಇತ್ತೀಚೆಗೆ ಹಿಂದೂಗಳ ಪೂಜೆಗೆ ಅವಕಾಶ ನೀಡಿತ್ತು. ಇದನ್ನು ಪ್ರಶ್ನಿಸಿ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.
ಇದೀಗ ನ್ಯಾ. ರೋಹಿತ್ ರಂಜನ್ ಅಗರ್ವಾಲ್ ನೇತೃತ್ವದ ಏಕಸದಸ್ಯ ಪೀಠ ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿದೆ. ಫೆಬ್ರವರಿ 15 ರಂದು ಹೈಕೋರ್ಟ್ ಗೆ ತೀರ್ಪು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು. ಇದೀಗ ಎರಡೂ ಕಡೆಯವರ ವಾದ-ವಿವಾದ ಆಲಿಸಿ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ.
ಈ ಹಿಂದಿನ ಜಿಲ್ಲಾ ನ್ಯಾಯಾಲದ ಆದೇಶ ಪ್ರಕಾರ ನೆಲಮಾಳಿಗೆಯಲ್ಲಿ ವಿಗ್ರಹವಿಟ್ಟು ಪೂಜೆ ಸಲ್ಲಿಸಲಾಗಿತ್ತಿದೆ. ಆದರೆ ಇದಕ್ಕೆ ಮುಸ್ಲಿಮರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಜ್ಞಾನವಾಪಿ ಮಸೀದಿಯನ್ನು ಹಿಂದೂ ದೇವಾಲಯದ ಮೇಲೆ ಕಟ್ಟಲಾಗಿದೆ. ಪಶ್ಚಿಮ ಗೋಡೆಯ ಹಿಂದಿನ ದೇವಸ್ಥಾನದಲ್ಲಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ಅವಕಾಶ ಕೊಡಬೇಕು ಎಂದು ಐವರು ಮಹಿಳೆಯರು 2021 ರಲ್ಲಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅದರಂತೆ ಕೋರ್ಟ್ ಆಗ ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಜ್ಞಾನವಾಪಿ ಮಸೀದಿಯ ವಿಡಿಯೋಗ್ರಾಫಿಕ್ ಸಮೀಕ್ಷೆ ಕೈಗೊಳ್ಳಲು ಸೂಚಿಸಿತ್ತು. ಅದರಂತೆ ಸಮೀಕ್ಷೆ ನಡೆಸಿದಾಗ ಮಸೀದಿಯ ಆವರಣದಲ್ಲಿ ಶಿವಲಿಂಗವಿರುವುದು ಪತ್ತೆಯಾಗಿತ್ತು. ಹೀಗಾಗಿ ಇಲ್ಲಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ಅವಕಾಶ ಕೊಡಬೇಕು ಎಂದು ಹಿಂದೂಗಳು ವಾದಿಸುತ್ತಿದ್ದಾರೆ.