ಇಂಧೋರ್: ಮಧ್ಯಪ್ರದೇಶದ ಹಾರ್ದಾದಲ್ಲಿ ಪಟಾಕಿ ಫ್ಯಾಕ್ಟರಿಯೊಂದರಲ್ಲಿ ಸ್ಪೋಟ ಸಂಭವಿಸಿದ್ದು, 7 ಮಂದಿ ಸಾವನ್ನಪ್ಪಿ, 60 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಇಂದು ಬೆಳಿಗ್ಗೆ ಈ ದುರಂತ ಸಂಭವಿಸಿದೆ. ಅಕ್ರಮವಾಗಿ ನಿರ್ಮಿಸಲಾಗಿದ್ದ ಪಟಾಕಿ ಫ್ಯಾಕ್ಟರಿಯಲ್ಲಿ ಸ್ಪೋಟ ಸಂಭವಿಸಿದ್ದು, ಹತ್ತಿರದ ಸುಮಾರು 60 ಕ್ಕೂ ಹೆಚ್ಚು ಮನೆಗಳಿಗೂ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಸ್ಪೋಟದ ಸದ್ದು, ಬೆಂಕಿಯ ಕೆನ್ನಾಲೆಗೆ ಜನ ದಿಕ್ಕಾಪಾಲಾಗಿ ಓಡಿದ್ದಾರೆ.
ತಕ್ಷಣವೇ ಕಾರ್ಯಪ್ರವೃತ್ತರಾದ ರಕ್ಷಣಾ ಸಿಬ್ಬಂದಿಗಳು ಅಕ್ಕಪಕ್ಕದ ನಿವಾಸಿಗಳನ್ನು ಸ್ಥಳಾಂತರಿಸುವ ಕೆಲಸ ಮಾಡಿದ್ದಾರೆ. ಭಾರೀ ಸ್ಪೋಟವಾಗಿದ್ದರಿಂದ ಅಕ್ಕಪಕ್ಕದಲ್ಲಿ ಪಾರ್ಕ್ ಮಾಡಲಾಗಿದ್ದ ದ್ವಿಚಕ್ರ ವಾಹನಗಳೂ ಬೆಂಕಿಗೆ ಆಹುತಿಯಾಗಿವೆ ಎಂದು ತಿಳಿದುಬಂದಿದೆ. ಸ್ಪೋಟದ ಭೀಕರತೆ ನೋಡಿದರೆ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ‍್ಯತೆಯಿದೆ ಎನ್ನಲಾಗಿದೆ.
ಪೊಲೀಸರು ಹೇಳಿದ್ದೇನು?
ಘಟನೆ ಬಗ್ಗೆ ವಿವರಣೆ ನೀಡಿರುವ ಹರ್ದಾ ಎಸ್ ಪಿ ಸಂಜೀವ್ ಕಂಚನ್ ಭಾರೀ ಸ್ಪೋಟದಿಂದಾಗಿ ಇಡೀ ನಗರವೇ ಹೊಗೆಯಿಂದ ಆವೃತವಾಗಿದೆ. ಅಗ್ನಿಶಾಮಕ ದಳದವರನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಸ್ಪೋಟಕ್ಕೆ ಕಾರಣವೇನೆಂದು ಇನ್ನೂ ತಿಳಿದುಬಂದಿಲ್ಲ ಎಂದು ಹೇಳಿದ್ದಾರೆ.
ದುರಂತದ ವೇಳೆ ಫ್ಯಾಕ್ಟರಿಯಲ್ಲಿ 100 ಕಾರ್ಮಿಕರಿದ್ದರು ಎನ್ನಲಾಗಿದೆ. ಘಟನೆ ನಡೆದ ಬೆನ್ನಲ್ಲೇ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ತುರ್ತು ಸಭೆ ಕರೆದಿದ್ದು, ಪರಿಹಾರ ಕಾರ್ಯಗಳ ಕುರಿತು ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದ್ದಾರೆ. ಈಗಾಗಲೇ ಸ್ಥಳದಲ್ಲಿ ವೈದ್ಯಕೀಯ ತಂಡ, ರಾಷ್ಟ್ರೀಯ ವಿಪತ್ತು ದಳ ಸಿಬ್ಬಂದಿ, ಅಗ್ನಿಶಾಮಕ ದಳ ಸೇರಿದಂತೆ ರಕ್ಷಣಾ ಸಿಬ್ಬಂದಿಗಳು ತ್ವರಿತಗತಿಯಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿವೆ.