ಇಂದಿನಿಂದ ಕೇಂದ್ರದಿಂದ ಭಾರತ್ ಅಕ್ಕಿ ಮಾರಾಟ: ಬೆಲೆ ಎಷ್ಟು? ಇಲ್ಲಿದೆ ಡೀಟೈಲ್ಸ್

Krishnaveni K

ಮಂಗಳವಾರ, 6 ಫೆಬ್ರವರಿ 2024 (10:28 IST)
ನವದೆಹಲಿ: ಕೇಂದ್ರ ಸರ್ಕಾರ ಮಾರಾಟ ಮಾಡಲು ಉದ್ದೇಶಿಸಿರುವ ಭಾರತ್ ಬ್ರ್ಯಾಂಡ್ ನ ಅಕ್ಕಿ ಇಂದಿನಿಂದ ಗ್ರಾಹಕರ ಕೈಗೆ ಸಿಗಲಿದೆ. ಈ ಯೋಜನೆಗೆ ಇಂದು ಸಂಜೆ ಬೆಂಗಳೂರಿನಲ್ಲಿ ಚಾಲನೆ ಸಿಗಲಿದೆ.

ಇಂದು ಸಂಜೆ 4 ಗಂಟೆಗೆ ಬೆಂಗಳೂರಿನಲ್ಲಿ ಭಾರತ್ ಬ್ರ್ಯಾಂಡ್ ಅಕ್ಕಿ ವಾಹನಗಳಿಗೆ ಚಾಲನೆ ಸಿಗಲಿದೆ. ಕಡಿಮೆ ಬೆಲೆಗೆ ಗ್ರಾಹಕರಿಗೆ ಭಾರತ್ ಬ್ರ್ಯಾಂಡ್ ನ ಅಕ್ಕಿ ಸಿಗಲಿದೆ. ಈ ಅಕ್ಕಿಗೆ ಕೇಂದ್ರ ಸರ್ಕಾರ ಕೆ.ಜಿ.ಗೆ 29 ರೂ. ನಿಗದಿಪಡಿಸಿದೆ. ಅಕ್ಕಿ ಬೆಲೆ ಏರಿಕೆ ಸಂದರ್ಭದಲ್ಲಿ ಸಾಮಾನ್ಯ ಜನರಿಗೆ ಕಡಿಮೆ ಬೆಲೆಗೆ ಅಕ್ಕಿ ಸಿಗುವಂತೆ ಮಾಡಲು ಕೇಂದ್ರ ಈ ಯೋಜನೆ ರೂಪಿಸಿದೆ.

ಅಕ್ಕಿ ದರ ಏರಿಕೆ ನಿಯಂತ್ರಿಸಲು ಈ ಯೋಜನೆಗೆ ಕೇಂದ್ರ  ಚಾಲನೆ ನೀಡುತ್ತಿದೆ. ನಾಫೆಡ್- ಭಾರತ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟದಿಂದ ಇಂದು  ನಾಫೆಡ್  ನ 7 ಸಂಚಾರಿ ವಾಹನಗಳಲ್ಲಿ ಭಾರತ್ ಅಕ್ಕಿ ಮಾರಾಟ ಮಾಡಲಾಗುತ್ತದೆ. 5 ಮತ್ತು 10 ಕೆ.ಜಿ. ಚೀಲಗಳಲ್ಲಿ ಅಕ್ಕಿ ಲಭ್ಯವಿರಲಿದೆ.  ಇಂದು ಬೆಂಗಳೂರಿನಲ್ಲಿ ನಾಳೆ ಮಂಡ್ಯದಲ್ಲಿ ಅಕ್ಕಿ ಮಾರಾಟವಾಗಲಿದೆ.

ಆನ್‍ ಲೈನ್ ನಲ್ಲಿ ಖರೀದಿ ಮಾಡುವುದು ಹೇಗೆ?
ಕೇವಲ ನೇರ ಖರೀದಿ ಮಾತ್ರವಲ್ಲ, ಆನ್ ಲೈನ್ ನಲ್ಲೂ ಅಕ್ಕಿ ಖರೀದಿಗೆ ಅವಕಾಶ ನೀಡಲಾಗಿದೆ. ಇದೀಗ ಫ್ಲಿಪ್ ಕಾರ್ಟ್, ರಿಲಯನ್ಸ್ ಫ್ರೆಶ್, ಫ್ಲಿಪ್ ಕಾರ್ಟ್, ಬಿಗ್ ಬಾಸ್ಕೆಟ್ ನಂತಹ ಆನ್ ಲೈನ್ ಮಾರುಕಟ್ಟೆಯಲ್ಲಿ ಅಕ್ಕಿ ಮಾರಾಟವಾಗಲಿದೆ. ಕೆಲವೇ ದಿನಗಳ ಬಳಿಕ ಇತರೆ ಸ್ಟೋರ್ ಗಳಲ್ಲಿಯೂ ಅಕ್ಕಿ ಲಭ್ಯವಿರಲಿದೆ. ಯಶವಂತಪುರದ ಮುಖ್ಯ ಗೋಡೌನ್ ನಿಂದ ಬೆಂಗಳೂರಿನ ವಿವಿಧ ಭಾಗಗಳಿಗೆ ಮೊಬೈಲ್ ವ್ಯಾನ್ ಮೂಲಕ ಮನೆ ಮನೆಗೆ ಅಕ್ಕಿ ತಲುಪಿಸಲು ವ್ಯವಸ್ಥೆ ಮಾಡಲಾಗಿದೆ.

ಇತ್ತೀಚೆಗಿನ ದಿನಗಳಲ್ಲಿ ದಿನಸಿ ಸಾಮಾನುಗಳ ಬೆಲೆ ಗಗನಕ್ಕೇರಿದೆ. ಇದರಿಂದ ಜನರಿಗೆ ತೀವ್ರ ಕಷ್ಟವಾಗುತ್ತಿದೆ. ಹೀಗಾಗಿ ಜನರ ಕಷ್ಟಕ್ಕೆ ನೆರವಾಗಲು ಕೇಂದ್ರ ಸರ್ಕಾರ ಇಂತಹದ್ದೊಂದು ಯೋಜನೆ ಜಾರಿಗೆ ತರುತ್ತಿದೆ.  ಸರ್ಕಾರ ಈಗಾಗಲೇ ಭಾರತ್ ಬ್ರ್ಯಾಂಡ್ ನ ಹೆಸರಿನಲ್ಲಿ ಗೋಧಿ ಮತ್ತು ಬೇಳೆ ಮಾರಾಟ ಮಾಡುತ್ತಿದೆ. ಇದೀಗ ಅಕ್ಕಿ ಮಾರಾಟಕ್ಕೆ ಮುಂದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ