ಹರ್ಯಾಣ: ಹೆಂಡತಿ ಜೊತೆ ಬಾಡಿಗೆದಾರನ ಕಳ್ಳ ಸಂಬಂಧ ತಿಳಿದ ಮನೆ ಮಾಲಿಕ ಆತನನ್ನು ಜೀವಂತವಾಗಿ ಹೂತು ಹಾಕಿದ ಎದೆ ಝಲ್ಲೆನಿಸುವ ಕೃತ್ಯದ ಫೋಟೋ ಇಲ್ಲಿದೆ ನೋಡಿ.
ಈ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಹರ್ಯಾಣದ ರೋಹ್ಟಕ್ ನಲ್ಲಿ ಘಟನೆ ನಡೆದಿದೆ. ಕಳೆದ ಡಿಸೆಂಬರ್ ನಲ್ಲೇ ಘಟನೆ ನಡೆದಿತ್ತು. ಇದೀಗ ಪೊಲೀಸರು ತನಿಖೆ ನಡೆಸಿ ಮೃತದೇಹವನ್ನು ಹೊರತೆಗೆದಿದ್ದಾರೆ. ಕೃತ್ಯ ನೋಡಿದ ಪೊಲೀಸರೇ ಅರೆಕ್ಷಣ ಬೆಚ್ಚಿಬಿದ್ದಿದ್ದಾರೆ.
ಆರೋಪಿ, ಮನೆ ಮಾಲಿಕ ಜಗದೀಪ್ ಯೋಗ ಶಿಕ್ಷಕನಾಗಿದ್ದ. ಹರ್ದೀಪ್ ಎಂಬಾತ ಕೊಲೆಯಾದ ಬಾಡಿಗೆದಾರ. ಜಗದೀಪ್ ಪತ್ನಿ ಜೊತೆ ಹರ್ದೀಪ್ ಅಕ್ರಮ ಸಂಬಂಧವಿಟ್ಟುಕೊಂಡಿದ್ದ. ಇದು ಜಗದೀಪ್ ಗಮನಕ್ಕೆ ಬಂದಿತ್ತು.
ಇದರಿಂದ ರೊಚ್ಚಿಗೆದ್ದ ಜಗದೀಪ್ ತನ್ನ ಸ್ನೇಹಿತರ ಜೊತೆಗೆ ಕೊಲೆಗೆ ಸ್ಕೆಚ್ ಹಾಕಿದ್ದ. ಇದಕ್ಕೆ ಪೂರ್ವ ಸಿದ್ಧತೆಯಾಗಿ ತನ್ನ ಗ್ರಾಮದಲ್ಲಿ 7 ಅಡಿ ಗುಂಡಿ ತೋಡಿಸಿದ್ದ. ಯಾಕೆ ಎಂದು ಕೇಳಿದ್ದಕ್ಕೆ ಇದು ಬೋರ್ ವೆಲ್ ಗಾಗಿ ಎಂದಿದ್ದ. ನಂತರ ಸ್ನೇಹಿತರ ಸಹಾಯದೊಂದಿಗೆ ಹರ್ದೀಪ್ ನನ್ನು ಅಪಹರಿಸಿ ಕೈ ಕಾಲು ಕಟ್ಟಿ, ಬಾಯಿಗೆ ಟೇಪ್ ತುರುಕಿ ಏಳು ಅಡಿ ಗುಂಡಿ ತೋಡಿ ಅದರಲ್ಲಿ ಜೀವಂತ ಹೂತು ಹಾಕಿದ್ದ.
ಕೊಲೆಯಾದ 10 ದಿನಗಳ ಬಳಿಕ ಶಿವಾಜಿ ಕಾಲೊನಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿತ್ತು. ಈ ಸಂಬಂಧ ತನಿಖೆ ನಡೆಸಿದ ಪೊಲೀಸರಿಗೆ ಜಗದೀಪ್ ನ ಬಗ್ಗೆ ಅನುಮಾನವಾಗಿತ್ತು. ಆತನ ಫೋನ್ ಕರೆಗಳನ್ನು ಪರಿಶೀಲಿಸಿ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಪ್ರಕರಣ ಬಯಲಿಗೆ ಬಂದಿದೆ. ಹರ್ದೀಪ್ ನನ್ನು ಹೂತು ಹಾಕಿದ ಗುಂಡಿ ಅಗೆಸಿ ಮೃತದೇಹವನ್ನು ಹೊರತೆಗೆಯಲಾಗಿದೆ. ಹತ್ಯೆಗೆ ಸಹಾಯ ಮಾಡಿದ ಜಗದೀಪ್ ಸ್ನೇಹಿತರಿಗಾಗಿ ಹುಡುಕಾಟ ನಡೆದಿದೆ.