28ರಂದು ಜಾರ್ಖಂಡ್ ಮುಖ್ಯಮಂತ್ರಿಯಾಗಿ ಹೇಮಂತ್ ಪ್ರಮಾಣ ವಚನ, ಯಾರೆಲ್ಲ ಬರಲಿದ್ದಾರೆ ಗೊತ್ತಾ

Sampriya

ಸೋಮವಾರ, 25 ನವೆಂಬರ್ 2024 (17:16 IST)
Photo Courtesy X
ರಾಂಚಿ:  ನ.28ರಂದು ಜಾರ್ಖಂಡ್‌ನಲ್ಲಿ ಮುಖ್ಯಮಂತ್ರಿಯಾಗಿ ನಾಲ್ಕನೇ ಅವಧಿಗೆ ಜೆಎಂಎಂ ಕಾರ್ಯಾಧ್ಯಕ್ಷ ಹೇಮಂತ್ ಸೊರೇನ್‌ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಸೇರಿದಂತೆ 'ಇಂಡಿಯಾ' ಮೈತ್ರಿಕೂಟದ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನವೆಂಬರ್ 28ರಂದು ರಾಂಚಿಯ ಮೊರಾಬಾಡಿ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಇಂಡಿಯಾ ಮೈತ್ರಿಕೂಟದ ಎಲ್ಲ ಪ್ರಮುಖ ನಾಯಕರನ್ನು ಆಹ್ವಾನಿಸಲಾಗಿದೆ.

ಪ್ರಸ್ತುತ ಉಸ್ತುವಾರಿ ಮುಖ್ಯಮಂತ್ರಿ ಆಗಿರುವ ಸೊರೇನ್‌ ಅವರಿಗೆ ನೂತನ ಸರ್ಕಾರ ರಚಿಸಲು ರಾಜ್ಯಪಾಲರಾದ ಸಂತೋಷ್‌ ಗಂಗ್ವಾರ್‌ ಅವರು ಭಾನುವಾರ ಆಹ್ವಾನಿಸಿದ್ದರು

ಇದಕ್ಕೂ ಮೊದಲು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ಹೇಮಂತ್ ಅವರಿಗೆ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವವರೆಗೆ ಉಸ್ತುವಾರಿ ಮುಖ್ಯಮಂತ್ರಿಯಾಗಿ ಮುಂದುವರಿಯಲು ರಾಜ್ಯಪಾಲರು ಸೂಚಿಸಿದ್ದರು.

81 ಸದಸ್ಯ ಬಲದ ಜಾರ್ಖಂಡ್‌ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ‘ಇಂಡಿಯಾ’ ಮೈತ್ರಿಕೂಟವು 56 ಸ್ಥಾನಗಳಿಸಿತ್ತು. ರಾಜ್ಯದಲ್ಲಿ ಸರ್ಕಾರ ರಚನೆಗೆ ಸರಳ ಬಹುಮತವಾಗಿ 41 ಸ್ಥಾನದ ಅಗತ್ಯವಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ