ನವದೆಹಲಿ: ಕೇಂದ್ರ ಸರ್ಕಾರ ಹೊರಡಿಸಿರುವ ಕೆಲವೊಂದು ಯೋಜನೆಗಳ ಬಗ್ಗೆ ಜನಸಾಮಾನ್ಯರಿಗೆ ತಿಳಿಯುವುದೇ ಇಲ್ಲ. ಇತ್ತೀಚೆಗೆ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಫೋನ್ ಮುಖಾಂತರ ಪ್ರಧಾನ ಮಂತ್ರಿ ಮಾತೃತ್ವ ಯೋಜನೆ ಬಗ್ಗೆ ಪ್ರಚಾರ ನೀಡುತ್ತಿದೆ. ಹಾಗಿದ್ದರೆ ಪ್ರಧಾನ ಮಂತ್ರಿ ಮಾತೃತ್ವ ಯೋಜನೆ ಎಂದರೇನು? ಇದು ಯಾರಿಗೆ ಅನುಕೂಲ ಎಂದು ತಿಳಿಯಿರಿ.
ಯಾರಿಗೆ ಅನುಕೂಲ
ಪ್ರಧಾನ ಮಂತ್ರಿ ಮಾತೃತ್ವ ಯೋಜನೆ ಎನ್ನುವುದು ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಾರಿಗೊಳಿಸಿರುವ ಯೋಜನೆಯಾಗಿದೆ. ಇದು ಗರ್ಭಿಣಿಯರಿಗೆ ಅನುಕೂಲವಾಗುವಂತೆ ಮಾಡಿರುವ ಯೋಜನೆಯಾಗಿದೆ. ಗರ್ಭಿಣಿ ಮಹಿಳೆಯರಿಗೆ ಕೇಂದ್ರ ಸರ್ಕಾರದ ವತಿಯಿಂದ ನೇರವಾಗಿ ಅವರ ಖಾತೆಗೆ 6000 ರೂ. ಪ್ರೋತ್ಸಾಹ ಧನ ನೀಡಲಾಗುತ್ತದೆ. ಇದು ಮಹಿಳೆಯರ ಆಹಾರ, ಪಾನೀಯ, ಆರೋಗ್ಯಕ್ಕೆ ಸಂಬಂಧಿಸಿದ ಇತರೆ ಖರ್ಚು ವೆಚ್ಚ ನಿಭಾಯಿಸುವುದಕ್ಕೆ ನೀಡುವ ಯೋಜನೆಯಾಗಿದೆ. ವಿವಿಧ ಕಂತುಗಳಲ್ಲಾಗಿ 6000 ರೂ. ಮಹಿಳೆಯ ಖಾತೆಗೆ ವರ್ಗಾವಣೆಯಾಗುತ್ತದೆ. ಈ ಯೋಜನೆಯಡಿ ಗರ್ಭಧಾರಣೆಯ ಪೂರ್ವ ಮತ್ತು ನಂತರ ಚಿಕಿತ್ಸೆ, ಔಷಧೋಪಚಾರಗಳು, ಪರೀಕ್ಷಾ ಸೌಲಭ್ಯಗಳನ್ನು ಒದಗಿಸುತ್ತದೆ. ಈ ಯೋಜನೆಗೆ ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ. ಅಥವಾ ಹತ್ತಿರದ ಅಂಗನವಾಡಿ ಅಥವಾ ಆಶಾ ಕಾರ್ಯಕರ್ತೆಯರ ನೆರವಿನಿಂದ ಅರ್ಜಿ ಸಲ್ಲಿಸಬಹುದಾಗಿದೆ.
ಯೋಜನೆಯ ಉದ್ದೇಶ
ಮಕ್ಕಳಲ್ಲಿ ಪೌಷ್ಠಿಕತೆಯ ಕೊರತೆ ಕಾಡದೇ ಇರುವಂತೆ ನೋಡಿಕೊಳ್ಳಲು ಬಡ ಮಹಿಳೆಯರಿಗೆ ಸರಿಯಾದ ಪೋಷಕಾಂಶಭರಿತ ಆಹಾರ ಸೇವಿಸಲು ಸಹಾಯವಾಗುವಂತೆ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಮೂಲಕ ಜೀವ ಹಾನಿ ತಡೆಯುವುದು ಯೋಜನೆಯ ಉದ್ದೇಶವಾಗಿದೆ.
ಪ್ರಧಾನ ಮಂತ್ರಿ ಮಾತೃತ್ವ ವಂದನಾ ಯೋಜನೆಯ ಫಲಾನುಭವಿಗಳು 3 ಕಂತುಗಳಲ್ಲಿ 5000 ರೂ. ಪಡೆಯುತ್ತಾರೆ. ನೋಂದಣಿ ಆದ ತಕ್ಷಣ ಮೊದಲ ಕಂತಿನ ರೂಪದಲ್ಲಿ 1,000 ರೂ. ಬರುತ್ತದೆ. ಗರ್ಭಿಣಿಗೆ ಆರು ತಿಂಗಳ ಅವಧಿಯಲ್ಲಿ ಎರಡನೇ ಕಂತು 2,000 ರೂ. ಸಂದಾಯವಾಗುತ್ತದೆ. ಹೆರಿಗೆಯಾದ ನಂತರ 2,000 ಕೊನೆಯ ಕಂತು ಮತ್ತು ಉಳಿದ 1,000 ರೂ.ಗಳನ್ನು ಸಾಂಸ್ಥಿಕ ಹೆರಿಗೆಯ ನಂತರ ಮಹಿಳೆಯರಿಗೆ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಅರ್ಹತೆಗಳೇನು
ಭಾರತದ ಪ್ರತಿಯೊಬ್ಬ ಗರ್ಭಿಣಿ ಅಥವಾ ಹಾಲುಣಿಸುವ ತಾಯಿ ಈ ಯೋಜನೆಗೆ ಅರ್ಹರಾಗಿರುತ್ತಾರೆ.
ಮೊದಲ ಮಗುವಿಗೆ ಜನ್ಮ ನೀಡುವಾಗ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ.
ಅಗತ್ಯ ದಾಖಲೆಗಳು
ಆಧಾರ್ ಕಾರ್ಡ್
ಗರ್ಭಿಣಿ ಮಹಿಳೆಯ ಗಂಡನ ಆಧಾರ್ ಕಾರ್ಡ್ ನಂಬರ್
ಪುರಾವೆಗಳೊಂದಿಗೆ ಮೂಲ ಒಪ್ಪಂದ
ಜಾತಿ ಪ್ರಮಾಣ ಪತ್ರ
ಗರ್ಭಧಾರಣೆಯ ಪುರಾವೆ ಪತ್ರ
ಪ್ಯಾನ್ ಕಾರ್ಡ್
ಗರ್ಭಿಣಿ ಮಹಿಳೆಯ ಬ್ಯಾಂಕ್ ವಿವರ
ಮೊಬೈಲ್ ಸಂಖ್ಯೆ
ಪಾಸ್ಪೋರ್ಟ್ ಫೋಟೋ
ಅರ್ಜಿ ಸಲ್ಲಿಸುವುದು ಹೇಗೆ?
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ https://web.umang.gov.in/web_new/login ಎಂಬ ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ವೆಬ್ ಸೈಟ್ ಗೆ ಲಾಗಿನ್ ಆಗಿ ಅರ್ಜಿ ಸಲ್ಲಿಸಬಹುದು. ಅಥವಾ ಹತ್ತಿರದ ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಬಹುದು.