ಮುಂಬೈ: ಪತ್ನಿಯನ್ನು ಬಾಯಿಗೆ ಬಂದಂರೆ ಕರೆಯುವ ಮೊದಲು ಹುಷಾರ್! ಇಲ್ಲೊಂದು ಘಟನೆಯಲ್ಲಿ ಪತ್ನಿಯನ್ನು ಸೆಕೆಂಡ್ ಹ್ಯಾಂಡ್ ಎಂದು ಕರೆದ ಪತಿ ಈಗ ಭಾರೀ ಬೆಲೆ ತೆರಬೇಕಾಗಿಬಂದಿದೆ.
1994 ರಲ್ಲಿ ವಿವಾಹವಾಗಿದ್ದ ಜೋಡಿ 2008 ರಲ್ಲಿ ಕೌಟುಂಬಿಕ ಮನಸ್ತಾಪಗಳಿಂದಾಗಿ ದೂರವಾಗಿದ್ದರು. ಇದಾದ ಬಳಿಕ ಅಮೆರಿಕಾದಲ್ಲಿ ಸೆಟಲ್ ಆಗಿದ್ದ ಪತಿ ಅಲ್ಲಿಯೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ. ಇತ್ತ ಮುಂಬೈನಲ್ಲಿ ಸೆಟಲ್ ಆಗಿದ್ದ ಪತ್ನಿ ಮುಂಬೈನ ನ್ಯಾಯಾಲಯದಲ್ಲಿ ಕೌಟುಂಬಿಕ ಕಿರುಕುಳ ಪ್ರಕರಣ ದಾಖಲಿಸಿದ್ದಳು.
2018 ರಲ್ಲಿ ಅಮೆರಿಕಾದ ನ್ಯಾಯಾಲಯವು ಇಬ್ಬರಿಗೆ ವಿಚ್ಛೇದನಕ್ಕೆ ಅನುಮತಿ ನೀಡಿತ್ತು. ಆದರೆ ಇತ್ತ ಮುಂಬೈನಲ್ಲಿ ಕೋರ್ಟ್ ಗೆ ದೂರು ನೀಡಿದ್ದ ಪತ್ನಿ ತನ್ನ ದೂರಿನಲ್ಲಿ ನೇಪಾಳದಲ್ಲಿ ಮಧುಚಂದ್ರಕ್ಕೆ ಹೋಗಿದ್ದಾಗ ತನ್ನನ್ನು ಪತಿ ಸೆಕೆಂಡ್ ಹ್ಯಾಂಡ್ ಎಂದು ಕರೆದಿದ್ದು ಸೇರಿದಂತೆ ಪತಿಯ ಅನೇಕ ಕ್ರೌರ್ಯದ ಬಗ್ಗೆ ಬರೆದುಕೊಂಡಿದ್ದಳು. ಆತನನ್ನು ಮದುವೆಯಾಗುವ ಮೊದಲು ಇನ್ನೊಬ್ಬನೊಂದಿಗೆ ನಿಶ್ಚಿತಾರ್ಥವಾಗಿ ಮದುವೆ ಮುರಿದು ಬಿದ್ದಿತ್ತು. ಇದನ್ನೇ ಉಲ್ಲೇಖಿಸಿ ಆತ ಸೆಕೆಂಡ್ ಹ್ಯಾಂಡ್ ಎಂದು ಅವಮಾನಿಸಿದ್ದ.
ಅದರಂತೆ ಪತ್ನಿಯ ಅರ್ಜಿ ವಿಚಾರಣೆ ಮಾಡಿದ ಕೋರ್ಟ್ ಆತ ಸೆಕೆಂಡ್ ಹ್ಯಾಂಡ್ ಎಂದು ಅವಮಾನ ಮಾಡಿದ್ದನ್ನು ಕೌಟುಂಬಿಕ ದೌರ್ಜನ್ಯ ಎಂದು ಪರಿಗಣಿಸಿ 3 ಕೋಟಿ ರೂ. ದಂಡ ಮತ್ತು ಮಾಸಿಕ 1.5 ಲಕ್ಷ ರೂ. ಮಸಾಶನ ನೀಡುವಂತೆ ಆದೇಶಿಸಿದೆ.