ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ಇಂದು ಇಂಡಿಯಾ ಒಕ್ಕೂಟದ ಮಹತ್ವದ ಸಮಾವೇಶ ನಡೆಯಲಿದೆ. ಎಲ್ಲಾ ಇಂಡಿಯಾ ಬ್ಲಾಕ್ ನಾಯಕರು ಈ ಸಮಾವೇಶದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಮಿತ್ರ ಪಕ್ಷಗಳನ್ನು ಸೋಲಿಸಲು ಕಾಂಗ್ರೆಸ್ ನೇತೃತ್ವದಲ್ಲಿ ಇಂಡಿಯಾ ಒಕ್ಕೂಟ ರಚಿಸಲಾಗಿತ್ತು. ಅದರಂತೆ ವಿಪಕ್ಷಗಳ ಮೈತ್ರಿ ಕೂಟ ಹೊಂದಾಣಿಕೆ ಮಾಡಿಕೊಂಡು ಈ ಲೋಕಸಭೆ ಚುನಾವಣೆ ಎದಿರುಸುತ್ತಿವೆ. ಈ ನಡುವೆ ಕೆಲವು ಭಿನ್ನಾಭಿಪ್ರಾಯಗಳು ಕಂಡುಬಂದರೂ ಅಲ್ಲಲ್ಲಿ ತೇಪೆ ಹಾಕುವ ಯತ್ನವೂ ನಡೆದಿದೆ.
ಇಂದು ಲೋಕಸಭೆ ಚುನಾವಣೆಗೆ ಮುನ್ನ ವಿಪಕ್ಷಗಳ ಮೈತ್ರಿ ಕೂಟ ತಮ್ಮ ಒಗ್ಗಟ್ಟು ಪ್ರದರ್ಶಿಸಿ ಜನರಿಗೆ ಸಂದೇಶ ನೀಡಲು ಹೊರಟಿದೆ. ಇತ್ತೀಚೆಗಷ್ಟೇ ಎಎಪಿ ನಾಯಕ, ದೆಹಲಿ ಸಿಎಂ ಕೇಜ್ರಿವಾಲ್ ಬಂಧನವಾಗಿದೆ. ಇನ್ನೊಂದೆಡೆ ಐಟಿ ಇಲಾಖೆ ಕಾಂಗ್ರೆಸ್ ಬ್ಯಾಂಕ್ ಖಾತೆಯನ್ನು ಸೀಝ್ ಮಾಡಿದೆ. ಈ ಎಲ್ಲಾ ವಿಚಾರಗಳನ್ನಿಟ್ಟುಕೊಂಡು ವಿಪಕ್ಷ ನಾಯಕರು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಲಿದ್ದಾರೆ.
ಇತ್ತ, ಇಂಡಿಯಾ ಬ್ಲಾಕ್ ಸಮಾವೇಶದ ಬಗ್ಗೆ ಬಿಜೆಪಿ ಟಾಂಗ್ ಕೊಟ್ಟಿದೆ. ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿರುವ ಎಲ್ಲಾ ನಾಯಕರೂ ಒಂದಾಗುತ್ತಿದ್ದಾರೆ. ಇದೊಂದು ರೀತಿಯಲ್ಲಿ ಭ್ರಷ್ಟಾಷಾರ ಬಚಾವೊ ಆಂದೋಲನ ಎಂದು ಬಿಜೆಪಿ ವ್ಯಂಗ್ಯ ಮಾಡಿದೆ.