ನವದೆಹಲಿ : 5 ದಿನಗಳ ಹಿಂದಷ್ಟೇ ಭಾರತೀಯ ಸ್ಪರ್ಧಾ ಆಯೋಗ ಟೆಕ್ ದೈತ್ಯ ಗೂಗಲ್ಗೆ ತನ್ನ ಪ್ರಬಲ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಕ್ಕೆ 1,337 ಕೋಟಿ ರೂ. ದಂಡವನ್ನು ವಿಧಿಸಿತ್ತು.
ಇದೀಗ ಸಿಸಿಐ ಇಂತಹುದೇ ಕಾರಣವನ್ನು ನೀಡಿ ಗೂಗಲ್ಗೆ ಮತ್ತೊಮ್ಮೆ ಭಾರೀ ಮೊತ್ತದ ದಂಡವನ್ನು ವಿಧಿಸಿದೆ.
ಪ್ಲೇ ಸ್ಟೋರ್ ನೀತಿಗಳಿಗೆ ಸಂಬಂಧಿಸಿದಂತೆ ಗೂಗಲ್ ತನ್ನ ಪ್ರಬಲ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿರುವುದಕ್ಕೆ ಮಂಗಳವಾರ ಸಿಸಿಐ ಬರೋಬ್ಬರಿ 936.44 ಕೋಟಿ ರೂ. ದಂಡವನ್ನು ವಿಧಿಸಿದೆ. ಇದು 1 ವಾರದೊಳಗೆ ಗೂಗಲ್ಗೆ ಸಿಸಿಐ ವಿಧಿಸಿರುವ 2ನೇ ದಂಡವಾಗಿದೆ.
ಆದರೆ ಗೂಗಲ್ ದಂಡ ವಿಧಿಸಿರುವ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಕ್ರಮದಿಂದ ಭಾರತದ ಗ್ರಾಹಕರು ಹಾಗೂ ಉದ್ದಿಮೆಗಳಿಗೆ ದೊಡ್ಡ ಹಿನ್ನಡೆಯಾಗಲಿದೆ ಎಂದು ಕಂಪನಿ ಎಚ್ಚರಿಕೆ ನೀಡಿದೆ.