ಮೋದಿ ಬಲೂಚಿಸ್ತಾನ್ ಹೇಳಿಕೆ ರಂಗು ತಂತು: ಪಾಕಿಸ್ತಾನಕ್ಕೆ ಯುರೋಪ್ ಸಂಸತ್ ವಾರ್ನಿಂಗ್
ಶುಕ್ರವಾರ, 23 ಸೆಪ್ಟಂಬರ್ 2016 (19:35 IST)
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಲೂಚಿಸ್ತಾನ್ ಹೇಳಿಕೆ ಇದೀಗ ರಂಗು ತಂದಿದೆ. ಬಲೂಚಿಸ್ತಾನದ ಜನರ ಮೇಲೆ ಯಾವುದೇ ರೀತಿಯ ದೌರ್ಜನ್ಯ ನಡೆಸುವಂತಿಲ್ಲ ಎಂದು ಯುರೋಪ್ ಸಂಸತ್ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ.
ಮಹತ್ವದ ಬೆಳವಣಿಗೆಯೊಂದರಲ್ಲಿ ಯುರೋಪ್ ಸಂಸತ್‌ನ ಉಪಾಧ್ಯಕ್ಷ ರಿಸರ್ಡ್ ಝಾರ್ನೆಕಿ, ಬಲೂಚಿಸ್ತಾನದಲ್ಲಿ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಪಾಕಿಸ್ತಾನಕ್ಕೆ ಕಠಿಣ ಸಂದೇಶ ರವಾನಿಸಿದ್ದಾರೆ.
ಬಲೂಚಿಸ್ತಾನದಲ್ಲಿ ಹತ್ಯೆಯಾದವರಿಗೆ ಶೃದ್ಧಾಂಜಲಿ ಅರ್ಪಿಸಿದ ನಂತರ ಮಾತನಾಡಿದ ಅವರು, ಬಲೂಚಿಸ್ತಾನದ ಜನತೆಯ ಮೇಲೆ ದೌರ್ಜನ್ಯಗಳನ್ನು ನಿಲ್ಲಿಸದಿದ್ದಲ್ಲಿ ಪಾಕಿಸ್ತಾನಕ್ಕೆ ಆರ್ಥಿಕ ಮತ್ತು ರಾಜಕೀಯ ನಿರ್ಭಂಧನೆಗಳನ್ನು ಹೇರಲಾಗುವುದು ಎಂದು ಎಚ್ಚರಿಸಿದ್ದಾರೆ.
ನ್ಯೂಯಾರ್ಕ್ ನಗರದಲ್ಲಿರುವ ವಿಶ್ವಸಂಸ್ಥೆ ಕಚೇರಿಯ ಮುಂದೆ ಭಾರತೀಯರು ಮತ್ತು ಬಲೂಚಿಸ್ತಾನದ ಜನತೆ ಪಾಕಿಸ್ತಾನದ ವಿರುದ್ಧ ಪ್ರತಿಭಟನೆ ನಡೆಸಿ ಪಾಕ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಬಲೂಚಿಸ್ತಾನದಲ್ಲಿ ಮಾನವಾಧಿಕಾರದ ಉಲ್ಲಂಘನೆಯಾಗುತ್ತಿದೆ ಎಂದು ಹೇಳಿಕೆ ನೀಡಿದ ದಿನದಿಂದ, ಬಲೂಚ್ ನಾಗರಿಕರು ನಮಗೆ ಸಂಪೂರ್ಣ ಸ್ವಾತಂತ್ರ್ಯ ಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಬಲೂಚಿಸ್ತಾನದ ಉಚ್ಚಾಟಿತ ನಾಯಕ ಅಮಿರ್ ಅಹ್ಮದ್ ಸುಲೇಮಾನ್ ದೌಡ್ ಮಾತನಾಡಿ, ಪಾಕಿಸ್ತಾನ ರೋಗಗ್ರಸ್ಥ ದೇಶ ಎಂದು ಕಿಡಿಕಾರಿದ್ದಾರೆ.
ಬಲೂಚ್ ನಾಯಕರಾದ ಬ್ರಾಹುಮ್‌ದಾಗ್ ಬುಗ್ಟಿ ಭಾರತದಲ್ಲಿ ಆಶ್ರಯ ನೀಡುವಂತೆ ಭಾರತ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ