ಶ್ರೀಹರಿಕೋಟ: ಹೊಸ ವರ್ಷದಂದೇ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಹೊಸ ಸಾಧನೆಯತ್ತ ಹೆಜ್ಜೆಯಿಟ್ಟಿದೆ. ಇಂದು ಹೊಸ ಉಪಗ್ರಹವೊಂದನ್ನು ನಭಕ್ಕೆ ಹಾರಿಸಿದೆ.
ಬಾಹ್ಯಾಕಾಶದಲ್ಲಿ ಕಂಡುಬರುವ ತೀವ್ರವಾದ ಕ್ಷಕಿರಣಗಳನ್ನು ಅಧ್ಯಯನ ಮಾಡುವ ಎಕ್ಸ್ ಪೊಸ್ಕಾಟ್ ಉಪಗ್ರಹವನ್ನು ಇಂದು ಉಡ್ಡಯನ ಮಾಡಿದೆ. ಚಂದ್ರಯಾನ 3, ಮಂಗಳ ಯಾನ ಯೋಜನೆಯ ಬೆನ್ನಲ್ಲೇ ಇಸ್ರೋ ಮತ್ತೊಂದು ಸಾಹಸ ಮಾಡಿದೆ.
ಇಂದು ಬೆಳಿಗ್ಗೆ ಸುಮಾರು 9.10 ಕ್ಕೆ ಉಪಗ್ರಹವನ್ನು ಯಶಸ್ವಿಯಾಗಿ ಲಾಂಚ್ ಮಾಡಲಾಗಿದೆ ಎಂದು ಇಸ್ರೋ ಟ್ವೀಟ್ ಮಾಡಿದೆ. ಈ ವರ್ಷ ಉಡ್ಡಯನಗೊಂಡಿರುವ ಮೊದಲ ಉಪಗ್ರಹವಿದು. ಕಪ್ಪು ಕುಳಿಗಳು ಮತ್ತು ನ್ಯೂಟ್ರಾನ್ ನಕ್ಷತ್ರಗಳನ್ನು ಅಧ್ಯಯನ ಮಾಡಲು ಖಗೋಳ ವೀಕ್ಷಣಾಲಯವನ್ನು ಬಾಹ್ಯಾಕಾಶಕ್ಕೆ ಕಳುಹಿಸಿದ ಎರಡನೇ ರಾಷ್ಟ್ರ ಎಂಬ ಹೆಮ್ಮೆ ಇದೀಗ ಭಾರತದ್ದಾಗಿದೆ.
ಇದಕ್ಕೆ ಮೊದಲು 2021 ರಲ್ಲಿ ಅಮೆರಿಕಾ ಬಾಹ್ಯಾಕಾಶ ಸಂಸ್ಥೆ ನಾಸಾ ಇಮೇಜಿಂಗ್ ಎಕ್ಸ್-ರೇ ಪೊಲಾರಿಮೆಟ್ರಿ ಎಕ್ಸ್ ಪ್ಲೋರರ್ ಎಂಬ ಮಿಷನ್ ಆರಂಭಿಸಿತ್ತು. ಇದರ ಮೂಲಕ ಬಾಹ್ಯಾಕಾಶದಲ್ಲಿನ ಕಪ್ಪುಕುಳಿಗಳ ಬಗ್ಗೆ ಅಧ್ಯಯನ ಮಾಡಲಾಗುತ್ತಿದೆ.