ತಿರುವನಂತಪುರಂ: ಅಂಗನವಾಡಿಗಳಲ್ಲಿ ಪ್ರತಿನಿತ್ಯ ಮಕ್ಕಳಿಗೆ ರವೆ, ಗೋಧಿ ಉಪ್ಪಿಟ್ಟು ಇತ್ಯಾದಿ ಕೊಡಲಾಗುತ್ತದೆ. ಆದರೆ ಇನ್ನು ಮುಂದೆ ಅಂಗನವಾಡಿಯಲ್ಲೂ ಚಿಕನ್ ಬಿರಿಯಾನಿಯಂತಹ ರುಚಿಕರ ಆಹಾರವನ್ನು ಮಕ್ಕಳಿಗೆ ಕೊಡಲಾಗುತ್ತದಂತೆ. ಅಂಗನವಾಡಿ ಬಾಲಕನ ಮನವಿಗೆ ಸಚಿವರು ಓಕೆ ಎಂದಿದ್ದಾರೆ.
ಆದರೆ ಇದು ನಡೆದಿರುವುದು ಕೇರಳದಲ್ಲಿ. ಪುಟ್ಟ ಬಾಲಕನೊಬ್ಬ ಸೋಷಿಯಲ್ ಮೀಡಿಯಾದಲ್ಲಿ ಅಂಗನವಾಡಿಗಳಲ್ಲಿ ಉಪ್ಪಿಟ್ಟು ಬದಲಿಗೆ ಚಿಕನ್, ಬಿರಿಯಾನಿ ನೀಡುವಂತೆ ಮನವಿ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು.
ಇದು ಕೇರಳದ ಶಿಕ್ಷಣ ಸಚಿವೆ ವೀಣಾ ಜಾರ್ಜ್ ಗಮನಕ್ಕೆ ಬಂದಿದೆ. ಈ ವಿಡಿಯೋಗೆ ಸ್ಪಂದಿಸಿರುವ ಸಚಿವರು ಇನ್ನು ಅಂಗನವಾಡಿಗಳಲ್ಲಿ ಚಿಕನ್, ಬಿರಿಯಾನಿಯೂ ಸಿಗುವಂತೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಜೊತೆಗೆ ಅಂಗನವಾಡಿಗಳಲ್ಲಿನ ಆಹಾರ ಮೆನು ಪರಿಶೀಲಿಸುವುದಾಗಿ ಹೇಳಿದ್ದಾರೆ.
ಶಂಕು ಎಂಬ ಪುಟ್ಟ ಬಾಲಕ ಅಂಗನವಾಡಿಗಳಲ್ಲಿ ರುಚಿಕರ ಆಹಾರ ನೀಡಿ ಎಂದು ಮನವಿ ಮಾಡುವ ವಿಡಿಯೋ ಇನ್ ಸ್ಟಾಗ್ರಾಂನಲ್ಲಿ ವೈರಲ್ ಆಗಿತ್ತು. ಇದನ್ನು ಸಾಕಷ್ಟು ಜನ ಶೇರ್, ಲೈಕ್ಸ್ ಮಾಡಿದ್ದರು. ಹೀಗಾಗಿ ಈಗ ಮೊಟ್ಟೆ, ಹಾಲು, ಉಪ್ಪಿಟ್ಟು ಅಲ್ಲದೆ ರುಚಿಕರ ತಿಂಡಿ ನೀಡಲು ಸಚಿವರು ಒಪ್ಪಿದ್ದಾರೆ.