ಅಯೋಧ್ಯೆಯಲ್ಲಿ ಚಿಕನ್ ಸಿಗುತ್ತಾ? ಕೆಎಫ್ ಸಿಗೆ ಷರತ್ತು ವಿಧಿಸಿದ ಅಧಿಕಾರಿಗಳು

Krishnaveni K

ಗುರುವಾರ, 8 ಫೆಬ್ರವರಿ 2024 (08:20 IST)
ಅಯೋಧ್ಯೆ: ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಯಾದ ಬೆನ್ನಲ್ಲೇ ಪ್ರವಾಸಿಗರೂ ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಈ ನಡುವೆ ಇಲ್ಲಿನ ಮಾರುಕಟ್ಟೆಯೂ ವಿಸ್ತಾರವಾಗುತ್ತಿದೆ.

ಇದೀಗ ಅಯೋಧ್ಯೆಯಲ್ಲಿ ತಮ್ಮ ಔಟ್ ಲೆಟ್ ತೆರೆಯಲು ಅನುಮತಿ ನೀಡುವಂತೆ ಪ್ರಮುಖ ಚಿಕನ್ ಮಾರಾಟ ಮಳಿಗೆ ಕೆಎಫ್ ಸಿ ಸರ್ಕಾರೀ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದರೆ ಇದಕ್ಕೆ ಅಧಿಕಾರಿಗಳು ಷರತ್ತುಬದ್ಧ ಅನುಮತಿ ನೀಡಿದ್ದಾರೆ. ಕೇವಲ ಸಸ್ಯಾಹಾರೀ ಆಹಾರ ವಸ್ತುಗಳನ್ನು ಮಾರಾಟ ಮಾಡುವುದಿದ್ದರೆ ಮಾತ್ರ ಅವಕಾಶ. ಮಾಂಸ ಮಾರಾಟಕ್ಕೆ ಅವಕಾಶವಿಲ್ಲ ಎಂದಿದೆ.

ಅಯೋಧ್ಯೆಯಲ್ಲಿ ಮಾಂಸ ನಿಷೇಧ
ಪ್ರಭು ರಾಮಚಂದ್ರನ ಜನ್ಮಭೂಮಿಯಲ್ಲಿ ಮದ್ಯ, ಮಾಂಸಕ್ಕೆ ನಿಷೇಧ ಹೇರಿ ಉತ್ತರ ಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ. ಹೀಗಾಗಿ ಅಯೋಧ್ಯೆಯ ಸುತ್ತಮುತ್ತ ಎಲ್ಲೂ ಮಾಂಸ, ಮದ್ಯ ಮಾರಾಟಕ್ಕೆ ಅವಕಾಶವಿಲ್ಲ. ಆದರೆ ಇದೀಗ ಡೊಮಿನೊಸ್ ಪಿಜ್ಜಾಗೆ ಮಾತ್ರ ಒಂದು ಕಿ.ಮೀ. ದೂರದಲ್ಲಿ ತನ್ನ ಮಳಿಗೆ ತೆರೆಯಲು ಅವಕಾಶ ನೀಡಲಾಗಿದೆ.

ಇದರ ಬೆನ್ನಲ್ಲೇ ಕೆಎಫ್ ಸಿ ಕೂಡಾ ತನ್ನ ಮಳಿಗೆ ತೆರೆಯಲೂ ಅವಕಾಶ ಕೋರಿತ್ತು. ಆದರೆ ಕೇವಲ ಸಸ್ಯಾಹಾರದ ತಿನಿಸು ಮಾರುವುದಿದ್ದರೆ ಮಾತ್ರ ಅವಕಾಶ ಎಂದು ಅಧಿಕಾರಿಗಳು ಖಡಕ್ ಸೂಚನೆ ನೀಡಿದ್ದಾರೆ. ರಾಮಮಂದಿರ ಲೋಕಾರ್ಪಣೆ ಬಳಿಕ ಪ್ರಮುಖ ಆಹಾರೋತ್ಪನ್ನ ಸಂಸ್ಥೆಗಳು ಇಲ್ಲಿ ತಮ್ಮ ಮಳಿಗೆ ತೆರೆಯಲು ಮುಂದಾಗುತ್ತಿದ್ದಾರೆ. ಅವರೆಲ್ಲರಿಗೂ ಇದೇ ನಿಯಮ ಅನ್ವಯವಾಗಲಿದೆ.

ಹರಿದ್ವಾರದಲ್ಲೂ ಇದೆ ಇದೇ ರೂಲ್ಸ್
ಈ ನಿಯಮ ಕೇವಲ ಅಯೋಧ್ಯೆಯಲ್ಲಿ ಮಾತ್ರವಲ್ಲ. ಪುಣ್ಯ ಭೂಮಿ ಹರಿದ್ವಾರದಲ್ಲೂ ಇದೇ ನಿಯಮವಿದೆ. ಹೀಗಾಗಿ ಇಲ್ಲಿ ಸುತ್ತಮುತ್ತ ಎಲ್ಲೂ ಮದ್ಯ, ಮಾಂಸ ಮಾರಾಟ ಅಂಗಡಿಗಳು ನಿಮಗೆ ಸಿಗುವುದಿಲ್ಲ. ಪುಣ್ಯ ಭೂಮಿಯಲ್ಲಿ ಮಾಂಸಾಹಾರ, ಮದ್ಯ ತಂದು ಅಪವಿತ್ರಗೊಳಿಸಬಾರದು ಎಂಬ ಉದ್ದೇಶದಿಂದ ನಿರ್ಬಂಧ ವಿಧಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ