ನವದೆಹಲಿ : ರಾಷ್ಟ್ರೀಯ ಉದ್ಯಾನಗಳು ಹಾಗೂ ವನ್ಯಜೀವಿ ರಕ್ಷಿತಾರಣ್ಯಗಳ ಸುತ್ತಲಿನ 1 ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಬಫರ್ ವಲಯ ಎಂದು ಪರಿಗಣಿಸಬೇಕು,
ಎಂದು ಆದೇಶಿಸಿರುವ ಸರ್ವೋಚ್ಚ ನ್ಯಾಯಾಲಯ, ಈ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ನಡೆಯಬಾರದು ಹಾಗೂ ಕಾರ್ಖಾನೆಗಳು, ಕಾಯಂ ಕಟ್ಟಡಗಳು ತಲೆಯೆತ್ತಕೂಡದು ಎಂಬ ಮಹತ್ವದ ಸೂಚನೆ ನೀಡಿದೆ.
ಅರಣ್ಯ ರಕ್ಷಣೆ ಕುರಿತಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾ| ಎಲ್. ನಾಗೇಶ್ವರರಾವ್ ನೇತೃತ್ವದ ತ್ರಿಸದಸ್ಯ ಪೀಠ ಈ ಆದೇಶ ಹೊರಡಿಸಿದೆ.
ರಾಷ್ಟ್ರೀಯ ಉದ್ಯಾನಗಳು ಹಾಗೂ ವನ್ಯಜೀವಿ ರಕ್ಷಿತಾರಣ್ಯಗಳ ಸುತ್ತಲಿನ 1 ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ (ಇಎಸ್ಝಡ್) ಎಂದು ಪರಿಗಣಿಸಬೇಕು. ಇಲ್ಲಿ ಗಣಿಗಾರಿಕೆಗೆ ಅನುಮತಿಸಕೂಡದು.
ಕಾರ್ಖಾನೆ ಹಾಗೂ ಕಾಯಂ ಕಟ್ಟಡಗಳ ನಿರ್ಮಾಣ ನಡೆಯಬಾರದು. ಈ ವ್ಯಾಪ್ತಿಯಲ್ಲಿ ಈಗಾಗಲೇ ಕಟ್ಟಡಗಳು ತಲೆಯೆತ್ತಿದ್ದರೆ ಅಂಥ ಕಟ್ಟಡಗಳ ಪಟ್ಟಿಯನ್ನು ಎಲ್ಲ ರಾಜ್ಯಗಳ ಅರಣ್ಯ ಸಂರಕ್ಷಣಾಧಿಕಾರಿಗಳು ಸಿದ್ಧಪಡಿಸಬೇಕು ಹಾಗೂ ಇನ್ನು 3 ತಿಂಗಳ ಒಳಗೆ ನಮಗೆ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿತು.