ನವದೆಹಲಿ : ರಷ್ಯಾ-ಉಕ್ರೇನ್ ಮೇಲೆ ಯುದ್ಧ ಆರಂಭಿಸುತ್ತಿದ್ದಂತೆ ಭಾರತ ಮಧ್ಯಪ್ರವೇಶಿಸಬೇಕೆಂಬ ಮಾತು ಕೇಳಿಬರುತ್ತಿತ್ತು.
ಇದೀಗ ಮೂಲಗಳ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಜೊತೆ ಇಂದು ರಾತ್ರಿ ಮಾತುಕತೆಗೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ.
ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಅರಂಭಿಸುತ್ತಿದ್ದಂತೆ ಭಾರತದಲ್ಲಿರುವ ಉಕ್ರೇನ್ ರಾಯಭಾರಿ ಇಗೂರ್ ಪೋಲಿಖಾ, ಮೋದಿಯವರು ರಷ್ಯಾ ಅಧ್ಯಕ್ಷರಾದ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜೊತೆ ಮಾತುಕತೆ ನಡೆಸಬೇಕು. ಈಗಾಗಲೇ ಯುದ್ಧ ಆರಂಭವಾಗಿದೆ. ಇದರಿಂದ ಉಕ್ರೇನ್ ನಾಗರೀಕರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದರು.
ಇದಲ್ಲದೇ ವಿಶ್ವದ ಹಲವು ದೇಶಗಳೂ ಕೂಡ ಭಾರತ ಮಧ್ಯಪ್ರವೇಶಿಸಬೇಕೆಂದು ಅಭಿಪ್ರಾಯಪಟ್ಟಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಕೂಡ ಭಾರತದ ಪ್ರಧಾನಿ ಮೋದಿ ಮಾತುಕತೆ ನಡೆಸಿದರೆ ಯುದ್ಧ ನಿಲ್ಲಿಸಬಹುದೆಂಬ ಅಭಿಪ್ರಾಯ ಕೇಳಿಬರುತ್ತಿದೆ. ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಆರಂಭಿಸಿದ್ದು, ಈಗಾಗಲೇ 50ಕ್ಕೂ ಹೆಚ್ಚು ಸೈನಿಕರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.