ನವದೆಹಲಿ : 22 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದ ಮೋಹಿತ್ ಜೋಶಿ ಇನ್ಫೋಸಿಸ್ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಜೋಶಿ ಮುಂದಿನ ಡಿಸೆಂಬರ್ 20 ರಿಂದ ಟೆಕ್ ಮಹೀಂದ್ರಾ ಕಂಪನಿಯ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ 22 ವರ್ಷಗಳಿಂದ ಸೇವೆ ಸಲ್ಲಿಸಿದ್ದ ಇನ್ಫೋಸಿಸ್ ಸಂಸ್ಥೆಗೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ವರದಿ ಹೇಳಿದೆ.
ಮೋಹಿತ್ ಜೋಶಿ ಟೆಕ್ ಮಹೀಂದ್ರಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಹಾಗೂ ಕಂಪನಿಗಳ ಕಾಯಿದೆ 2013ರ ಅಡಿಯಲ್ಲಿ ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿಯಾಗಿ 5 ವರ್ಷಗಳ ಅವಧಿಗೆ ನೇಮಕಗೊಂಡಿದ್ದಾರೆ.
2023ರ ಡಿಸೆಂಬರ್ 20 ರಿಂದ ಜಾರಿಗೆ ಬರುವಂತೆ 2028ರ ಡಿಸೆಂಬರ್ 19 ರವರೆಗೆ ನೇಮಕ ಮಾಡಲಾಗಿದೆ ಎಂದು ಟೆಕ್ ಮಹೀಂದ್ರಾ ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಹಾಲಿ ಸಿಇಒ ಸಿ.ಪಿ ಗುರ್ನಾಸಿ ಅವರ ಅವಧಿ ಡಿಸೆಂಬರ್ 19ಕ್ಕೆ ಕೊನೆಗೊಳ್ಳಲಿದ್ದು, ನಂತರ ಜೋಶಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಿದೆ.