ನವದೆಹಲಿ: ರಾಹುಲ್ ಗಾಂಧಿಯನ್ನು ಭೇಟಿಯಾಗಬೇಕಾ? ಹಾಗಿದ್ದರೆ 10 ಕೆ.ಜಿ. ತೂಕ ಇಳಿಸಿಕೊಂಡು ಬನ್ನಿ! ಹೀಗಂತ ತನಗೆ ಸೂಚನೆ ನೀಡಲಾಗಿತ್ತು ಎಂದು ಮುಂಬೈ ಯೂತ್ ಕಾಂಗ್ರೆಸ್ ಉಚ್ಛಾಟಿತ ಅಧ‍್ಯಕ್ಷ ಝೀಶನ್ ಸಿದ್ದಿಕಿ ಆರೋಪಿಸಿದ್ದಾರೆ.
ಯೂತ್ ಕಾಂಗ್ರೆಸ್ ನಿಂದ ಉಚ್ಛಾಟನೆಗೊಂಡ ಬಳಿಕ ಝೀಶನ್ ಸಿದ್ದಿಕಿ ಕಾಂಗ್ರೆಸ್ ವಿರುದ್ಧ ಆರೋಪಗಳ ಸುರಿಮಳೆಗೈಯ್ದಿದ್ದಾರೆ. ರಾಹುಲ್ ಗಾಂಧಿ ಒಳ್ಳೆಯವರೇ. ಆದರೆ ಅವರ ಸುತ್ತ ಇರುವವರು ಕಾಂಗ್ರೆಸ್ ನ್ನು ಮುಗಿಸಲು ಬೇರೆ ಪಕ್ಷಗಳಿಂದ ಗುತ್ತಿಗೆ ತೆಗೆದುಕೊಂಡಿದ್ದಾರೆ ಎನಿಸುತ್ತದೆ ಎಂದಿದ್ದಾರೆ.
ಅತ್ಯಂತ ಪುರಾತನ ಪಕ್ಷವಾದ ಕಾಂಗ್ರೆಸ್ ನಲ್ಲಿ ಈಗ ಅಲ್ಪಸಂಖ್ಯಾತರಿಗೆ ಬೆಲೆಯಿಲ್ಲ. ಕೋಮುವಾದಿ ಪಕ್ಷವಾಗುತ್ತಿದೆ. ಮಲ್ಲಿಕಾರ್ಜುನ ಖರ್ಗೆಗೆ ಸಂಪೂರ್ಣ ಸ್ವತಂತ್ರವಾಗಿ ಪಕ್ಷ ಮುನ್ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಹಿರಿಯ ನಾಯಕರು. ಆದರೆ ಅವರ ಕೈಗಳನ್ನು ಕಟ್ಟಿಹಾಕಲಾಗಿದೆ. ರಾಹುಲ್ ಗಾಂಧಿ ಸುತ್ತ ಇರುವ ಜನರು ಸರಿಯಿಲ್ಲ. ಈ ಹಿಂದೆ ಒಮ್ಮೆ ಭಾರತ್ ಜೋಡೋ ಯಾತ್ರೆ ವೇಳೆ ರಾಹುಲ್ ಗಾಂಧಿಯ ಆಪ್ತರೊಬ್ಬರು, ಅವರನ್ನು ಭೇಟಿಯಾಗಲು ಬರಬೇಕಾದರೆ 10 ಕೆ.ಜಿ. ತೂಕ ಇಳಿಸಿ ಬನ್ನಿ ಎಂದಿದ್ದರು. ಇದು ಅಲ್ಪಸಂಖ್ಯಾತ ಸಮುದಾಯದ ನಾಯಕನಿಗೆ ಮಾಡಿದ ಅವಮಾನವಾಗಿತ್ತು. ಮುಸ್ಲಿಮನಾಗಿ ಕಾಂಗ್ರೆಸ್ ನಲ್ಲಿರುವುದೇ ತಪ್ಪಾ? ನಾನು ಯಾಕೆ ಟಾರ್ಗೆಟ್ ಆದೆ ಎಂದು ಪಕ್ಷವೇ ಉತ್ತರಿಸಬೇಕು ಎಂದಿದ್ದಾರೆ.
ಕೆಲವೇ ದಿನಗಳ ಮೊದಲು ಝೀಶನ್ ಸಿದ್ದಿಕಿ ತಂದೆ ಬಾಬ ಸಿದ್ದಿಕಿ ಅವರು ಅಜಿತ್ ಪವಾರ್ ಅವರ ಎನ್ ಸಿಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಅದರ ಬೆನ್ನಲ್ಲೇ ಝೀಶನ್ ಅವರನ್ನು ಯೂತ್ ಕಾಂಗ್ರೆಸ್ ಹುದ್ದೆಯಿಂದ ಉಚ್ಛಾಟಿಸಲಾಗಿದೆ.