ನಿರ್ಭಯಾ ಗ್ಯಾಂಗ್ ರೇಪ್ ಆದ ದಿನದ ಕ್ಷಣಗಳನ್ನು ಸ್ಮರಿಸಿದ ತಾಯಿ ಆಶಾ ದೇವಿ

ಶುಕ್ರವಾರ, 6 ಮಾರ್ಚ್ 2020 (10:30 IST)
ನವದೆಹಲಿ: ಇನ್ನೇನು ಮಾರ್ಚ್ 20 ರಂದು ದೆಹಲಿಯ ನಿರ್ಭಯಾ ಗ್ಯಾಂಗ್ ರೇಪಿಸ್ಟ್ ಗಳಿಗೆ ಗಲ್ಲು ಶಿಕ್ಷೆ ಜಾರಿಯಾಗಲಿದೆ. ಆದರೆ 2016 ರ ಅ ಕರಾಳ ರಾತ್ರಿ ಏನು ನಡೆದಿತ್ತು ಎಂಬುದನ್ನು ನಿರ್ಭಯಾ ತಾಯಿ ಆಶಾ ದೇವಿ ಮೆಲುಕು ಹಾಕಿದ್ದಾರೆ.


‘ಆವತ್ತು ಹೊರಗಡೆ ಹೋಗುವಾಗ ಮಗಳು 2-3 ಗಂಟೆಯಲ್ಲಿ ಬರುವುದಾಗಿ ಹೊರಗೆ ಹೋಗಿದ್ದಳು. ರಾತ್ರಿ 8 ಗಂಟೆಯಾದರೂ ಅವಳು ಬರಲಿಲ್ಲ. ಹೀಗಾಗಿ ಆಗಾಗ ಬಸ್ ಸ್ಟಾಪ್ ಗೆ ಹೋಗಿ ಅವಳಿಗಾಗಿ ನೋಡಿ ಬರುತ್ತಿದ್ದೆ. ಆದರೆ ಅವಳು ಬರಲೇ ಇಲ್ಲ.

ರಾತ್ರಿ 10 ಗಂಟೆಯ ವೇಳೆಗೆ ಅವಳ ತಂದೆ ಮನೆಗೆ ಬಂದರು. ಆಗಲೂ ಅವಳ ಸುಳಿವಿರಲಿಲ್ಲ. ಅವರೂ ಹುಡುಕಾಟ ನಡೆಸಿದರು. ಸುಮಾರು 11 ಗಂಟೆಗೆ ಸಫ್ದರ್ ಜಂಗ್ ಆಸ್ಪತ್ರೆಯಿಂದ ಫೋನ್ ಬಂದಿತ್ತು. ನಿಮ್ಮ ಮಗಳು ಇಲ್ಲಿ ಅಡ್ಮಿಟ್ ಆಗಿದ್ದಾಳೆ. ಅವಳಿಗೆ ತೀವ್ರ ಗಾಯವಾಗಿದೆ ಎಂದಷ್ಟೇ ಹೇಳಿದ್ದರು. ಆ ಕ್ಷಣಕ್ಕೆ ನಮಗೆ ನಿಜವಾಗಿ ಏನು ನಡೆದಿತ್ತು ಎಂದು ಗೊತ್ತಿರಲಿಲ್ಲ. ಆದರೆ ಆರು ಜನ ದುಷ್ಟರು ನಮ್ಮ ಮಗಳಿಗೆ ಈ ಗತಿ ತಂದಿದ್ದರು ಎಂದು ಮಾತ್ರ ಗೊತ್ತಾಯಿತು. ನನ್ನ ಮಗಳು ರಕ್ತದ ಮಡುವಿನಲ್ಲಿದ್ದಳು.

ಅವಳ ತುಟಿ ಒಡೆದಿತ್ತು. ಅವಳ ತಲೆಯಿಂದ ಚರ್ಮ ಕಿತ್ತು ಹೋಗಿತ್ತು. ದೇಹವಿಡೀ ಗಾಯದ ಗುರುತು, ರಕ್ತದ ಕಲೆಯಿತ್ತು. ಕೆಲವೆಡೆ ಮಾಂಸ ಕಾಣುತ್ತಿತ್ತು. ಇವಳಿಗೆ ಯಾವ ರೀತಿ ಹೊಲಿಗೆ ಹಾಕಿ ಗಾಯ ಕೂಡಿಸಲಿ ಎಂದು ಗೊತ್ತಾಗುತ್ತಿಲ್ಲ ಎಂದು ವೈದ್ಯರೇ ಅಸಹಾಯಕತೆ ವ್ಯಕ್ತಪಡಿಸಿದ್ದರು. ಕೆಲವು ದಿನಗಳ ನಂತರ ಅವಳಿಗೆ ಎಚ್ಚರವಾಗಿತ್ತು. ಆಗ ಅವಳು ಕೇಳಿದ ಮೊದಲ ಬೇಡಿಕೆಯೆಂದರೆ ಸ್ವಲ್ಪ ನೀರು ಕೊಡಿ ಅಂತ. ಆದರೆ ಆ ಪರಿಸ್ಥಿತಿಯಲ್ಲಿ ಅವಳಿಗೆ ಹನಿ ನೀರನ್ನೂ ಕೊಡುವಂತಿರಲಿಲ್ಲ. ಅವಳು ಸಾಯುವವರೆಗೂ ಅವಳಿಗೆ ಹನಿ ನೀರೂ ಕೊಡಲಾಗಲಿಲ್ಲ ಎಂಬ ಬೇಸರ ನನ್ನ ಜೀವಮಾನವಿಡೀ ಕಾಡಲಿದೆ. ಆ ದುರುಳರು ಮಾರ್ಚ್ 20 ಕ್ಕೆ ನೇಣಿನ ಕುಣಿಕೆ ಏರುವವರೆಗೆ ನಮಗೆ ಶಾಂತಿ ಸಿಗದು’ ಎಂದು ನಿರ್ಭಯಾ ತಾಯಿ ಆಶಾ ದೇವಿ ಅಂದಿನ ಕರಾಳ ದಿನವನ್ನು ಮೆಲುಕು ಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ