ನವದೆಹಲಿ : 23 ವಾರಗಳ ಭ್ರೂಣದ ಗರ್ಭಪಾತಕ್ಕೆ ಅವಕಾಶ ನೀಡುವಂತೆ ಕೋರಿ 25 ವರ್ಷದ ಅವಿವಾಹಿತ ಯುವತಿ ಸಲ್ಲಿಸಿದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾ ಮಾಡಿದೆ.
ಸಮ್ಮತಿಯ ಸೆಕ್ಸ್ನಿಂದ ಗರ್ಭವತಿಯಾಗಿ 20 ವಾರಗಳು ಮೀರಿದ ಭ್ರೂಣದ ಗರ್ಭಪಾತಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಆದೇಶ ನೀಡಿದೆ. ಪ್ರಕರಣ ಸುದೀರ್ಘ ವಿಚಾರಣೆ ನಡೆಸಿದ ಮುಖ್ಯ ನ್ಯಾ.ಸತೀಶ್ ಚಂದ್ರಶರ್ಮಾ ನೇತೃತ್ವದ ವಿಭಾಗೀಯ ಪೀಠವು,
ಒಪ್ಪಿಗೆಯ ಲೈಂಗಿಕ ಸಂಬಂಧದಿಂದ ಮಗುವನ್ನು ಹೆರುವ ಅವಿವಾಹಿತ ಮಹಿಳೆಗೆ ವೈದ್ಯಕೀಯ ಗರ್ಭಪಾತದ ನಿಯಮಗಳ ಪ್ರಕಾರ 20 ವಾರಗಳು ಮೀರಿದ ಗರ್ಭಾವಸ್ಥೆಯನ್ನು ಅಂತ್ಯಗೊಳಿಸಲು ಅನುಮತಿ ಇಲ್ಲ ಎಂದು ಹೇಳಿದೆ.
ಅವಿವಾಹಿತ ಮಹಿಳೆಯಾಗಿರುವ ಮತ್ತು ಸಮ್ಮತಿಯಿಂದ ಗರ್ಭ ಧರಿಸಿರುವ ಅರ್ಜಿದಾರರು, ವೈದ್ಯಕೀಯ ಮುಕ್ತಾಯದ ನಿಯಮಗಳು 2003ರ ಅಡಿಯಲ್ಲಿ ಯಾವುದೇ ಷರತ್ತುಗಳನ್ನು ಸ್ಪಷ್ಟವಾಗಿ ಒಳಗೊಂಡಿರುವುದಿಲ್ಲ. ಆದ್ದರಿಂದ, ಸೆಕ್ಷನ್ 3(2)(ಬಿ) ಈ ಪ್ರಕರಣದ ಸತ್ಯಾಸತ್ಯತೆಗಳಿಗೆ ಕಾಯ್ದೆ ಅನ್ವಯಿಸುವುದಿಲ್ಲ ಎಂದು ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.
ಎಂಟಿಪಿ ನಿಯಮಗಳ 3ಬಿ ಪ್ರಕಾರ 20 ವಾರಗಳ ನಂತರ ಅವಿವಾಹಿತ ಮಹಿಳೆಯ ಗರ್ಭಧಾರಣೆಯನ್ನು ಮುಕ್ತಾಯಗೊಳಿಸಲು ಅನುಮತಿಸುವುದಿಲ್ಲ. ಆದ್ದರಿಂದ, ನ್ಯಾಯಾಲಯವು ಈಗಿರುವ ಶಾಸನವನ್ನು ಮೀರಿ ಹೋಗುವಂತಿಲ್ಲ ಎಂದು ತನ್ನ ಆದೇಶದಲ್ಲಿ ಸೇರಿಸಿದೆ.
ನ್ಯಾಯಾಲಯವು ಅರ್ಜಿಯನ್ನು ಬಾಕಿ ಉಳಿಸಿಕೊಂಡಿದೆ. ಆಗಸ್ಟ್ 26ರೊಳಗೆ ಅರ್ಜಿಯ ಬಗ್ಗೆ ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ದೆಹಲಿಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸೂಚನೆ ನೀಡಿದೆ.